Skip to content
The Believer's Library

Indian Revised Version (IRV) Kannada - 2019

Psalms 5 IRVKan

Side by side with the Father's Heart Bible™

ಪ್ರಧಾನಗಾಯಕನ ಕೀರ್ತನ ಸಂಗ್ರಹದಿಂದ ಆರಿಸಿಕೊಂಡದ್ದು; ರಂಧ್ರವಾದ್ಯದೊಡನೆ ಹಾಡತಕ್ಕ ದಾವೀದನ ಕೀರ್ತನೆ.

ಭಕ್ತ ರಕ್ಷಕನಾದ ಯೆಹೋವನಿಗೆ ಉದಯಕೀರ್ತನೆ

1ಯೆಹೋವನೇ ನನ್ನ ಮೊರೆಗೆ ಕಿವಿಗೊಡು;ನನ್ನ ನರಳಾಟವನ್ನು ಲಕ್ಷ್ಯಕ್ಕೆ ತಂದುಕೋ.

2ನನ್ನ ಅರಸನೇ, ನನ್ನ ದೇವರೇ, ನಿನ್ನನ್ನೇ ಪ್ರಾರ್ಥಿಸುವೆನು;ನನ್ನ ಮೊರೆಯನ್ನು ಆಲಿಸು.

3ಯೆಹೋವನೇ, ಉದಯಕಾಲದಲ್ಲಿ ನನ್ನ ಸ್ವರವು ನಿನಗೆ ಕೇಳಿಸುವುದು;ಉದಯಕಾಲದಲ್ಲಿಯೇ ನನ್ನ ಪ್ರಾರ್ಥನೆಯನ್ನು ನಿನಗೆ ಸಮರ್ಪಿಸಿ,ನಿನ್ನಿಂದ ಸದುತ್ತರವನ್ನು ಎದುರುನೋಡುತ್ತಿರುವೆನು.

4ನೀನು ದುಷ್ಟತ್ವದಲ್ಲಿ ಸಂತೋಷಿಸುವ ದೇವರಲ್ಲ;ಕೆಟ್ಟದ್ದು ನಿನ್ನ ಬಳಿಯಲ್ಲಿ ತಂಗಲಾರದು.

5ಸೊಕ್ಕಿನವರು ನಿನ್ನ ಸನ್ನಿಧಿಯಲ್ಲಿ ನಿಲ್ಲಲಾರರು;ಅಧರ್ಮಿಗಳೆಲ್ಲರನ್ನು ನೀನು ಹಗೆಮಾಡುವಿ.

6ಸುಳ್ಳು ಹೇಳುವವರನ್ನು ನಾಶಮಾಡುವಿ;ಯೆಹೋವನೇ, ನರಹತ್ಯ ಮಾಡುವವರು ಮತ್ತು ಕಪಟಿಗಳು ನಿನಗೆ ಅಸಹ್ಯರಾಗಿದ್ದಾರೆ.

7ನಾನಂತು ನಿನ್ನ ಮಹಾಕೃಪೆಯನ್ನು ಹೊಂದಿದವನಾಗಿನಿನ್ನ ಮಂದಿರದೊಳಕ್ಕೆ ಪ್ರವೇಶಿಸುವೆನು;ನಿನ್ನಲ್ಲಿಯೇ ಭಯಭಕ್ತಿಯುಳ್ಳವನಾಗಿ,ನಿನ್ನ ಪರಿಶುದ್ಧ ಆಲಯದ ಕಡೆಗೆ ಅಡ್ಡಬೀಳುವೆನು.

8ಯೆಹೋವನೇ, ವಿರೋಧಿಗಳು ನನಗೆ ಕೇಡನ್ನೇ ಹಾರೈಸುತ್ತಿರುವುದರಿಂದನಿನ್ನ ನೀತಿಗೆ ಸರಿಯಾಗಿ ನನ್ನನ್ನು ನಡೆಸು;ನನ್ನ ಮುಂದೆ ನಿನ್ನ ಮಾರ್ಗವನ್ನು ಸರಾಗಮಾಡು.

9ಅವರ ಬಾಯಲ್ಲಿ ಯಥಾರ್ಥತ್ವವಿಲ್ಲ;ಅವರು ನಾಲಿಗೆಯಿಂದ ಸವಿಮಾತನಾಡಿದರೂ,ಅವರ ಹೃದಯವು ನಾಶಕರವಾದ ಗುಂಡಿ,ಅವರ ಗಂಟಲು ತೆರೆದಿರುವ ಸಮಾಧಿ.

10ದೇವರೇ, ಅವರು ನಿನಗೆ ವಿರುದ್ಧವಾಗಿ ತಿರುಗಿಬಿದ್ದವರು;ಆದುದರಿಂದ ಅವರನ್ನು ಅಪರಾಧಿಗಳೆಂದು ನಿರ್ಣಯಿಸು;ಅವರು ತಮ್ಮ ಕುಯುಕ್ತಿಯಿಂದಲೇ ಮೋಸ ಹೋಗಲಿ;ಅವರ ದ್ರೋಹವು ಅಪಾರವಾಗಿರುವುದರಿಂದ ಅವರನ್ನು ತಳ್ಳಿಬಿಡು.

11ನಿನ್ನನ್ನು ಮೊರೆಹೊಕ್ಕವರೆಲ್ಲರು ನಿನ್ನಲ್ಲಿ ಸಂತೋಷಪಡುವರು;ನೀನು ಕಾಪಾಡುವವನೆಂದು ಅವರು ಯಾವಾಗಲೂ ಆನಂದ ಧ್ವನಿಮಾಡುವರು.ನಿನ್ನ ನಾಮವನ್ನು ಪ್ರೀತಿಸುವವರು ನಿನ್ನಲ್ಲಿ ಉಲ್ಲಾಸಗೊಳ್ಳುವರು.

12ಯೆಹೋವನೇ, ನೀತಿವಂತನನ್ನು ಆಶೀರ್ವದಿಸುವವನು ನೀನೇ;ನಿನ್ನ ದಯವು ದೊಡ್ಡ ಗುರಾಣಿಯಂತೆ ಅವನನ್ನು ಆವರಿಸಿಕೊಳ್ಳುವುದು.

KAN-IRV Creative Commons License Indian Revised Version (IRV) - kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Indian Revised Version (IRV) Kannada - 2019 · Creative Commons - Attribution-ShareAlike [CC BY-SA]