Skip to content
The Believer's Library

Biblica® Open Kannada Contemporary Version 2022

Psalms 147 OKCV

Side by side with the Father's Heart Bible™

1ಯೆಹೋವ ದೇವರನ್ನು ಸ್ತುತಿಸಿರಿ.ಏಕೆಂದರೆ ನಮ್ಮ ದೇವರನ್ನು ಸ್ತುತಿಸುವುದು ಒಳ್ಳೆಯದು;ದೇವರನ್ನು ಸ್ತುತಿಸುವುದು ರಮ್ಯವೂ, ಯೋಗ್ಯವೂ ಆಗಿದೆ.

2ಯೆಹೋವ ದೇವರು ಯೆರೂಸಲೇಮನ್ನು ಕಟ್ಟುತ್ತಾರೆ,ಚದರಿಹೋದ ಇಸ್ರಾಯೇಲನ್ನು ಕೂಡಿಸುತ್ತಾರೆ.

3ದೇವರು ಮುರಿದ ಹೃದಯದವರನ್ನು ಸ್ವಸ್ಥಮಾಡಿ,ಅವರ ಗಾಯಗಳನ್ನು ಕಟ್ಟುತ್ತಾರೆ.

4ದೇವರು ನಕ್ಷತ್ರಗಳ ಸಂಖ್ಯೆಯನ್ನು ನಿರ್ಧರಿಸುತ್ತಾರೆ;ಅವೆಲ್ಲವುಗಳನ್ನು ಅವುಗಳ ಹೆಸರಿನಿಂದ ಕರೆಯುತ್ತಾರೆ.

5ನಮ್ಮ ಯೆಹೋವ ದೇವರು ದೊಡ್ಡವರು, ಬಹು ಶಕ್ತರು;ಅವರ ವಿವೇಕಕ್ಕೆ ಎಣೆಯಿಲ್ಲ.

6ಯೆಹೋವ ದೇವರು ಸಾತ್ವಿಕರನ್ನು ಉದ್ಧರಿಸುತ್ತಾರೆ;ದುಷ್ಟರನ್ನು ದಂಡಿಸುತ್ತಾರೆ.

7ಯೆಹೋವ ದೇವರಿಗೆ ಸ್ತೋತ್ರಗೀತೆ ಹಾಡಿರಿ,ನಮ್ಮ ದೇವರನ್ನು ಕಿನ್ನರಿಯಿಂದ ಸ್ತುತಿಸಿರಿ.

8ದೇವರು ಆಕಾಶವನ್ನು ಮೋಡಗಳಿಂದ ಮುಚ್ಚುತ್ತಾರೆ;ಭೂಮಿಗೆ ಮಳೆಯನ್ನು ಸುರಿಸುತ್ತಾರೆ;ಬೆಟ್ಟಗಳಲ್ಲಿ ಹುಲ್ಲನ್ನು ಬೆಳೆಸುತ್ತಾರೆ.

9ದೇವರು ಪಶುಗಳಿಗೂ,ಕೂಗುವ ಕಾಗೆ ಮರಿಗಳಿಗೂ ಆಹಾರ ಕೊಡುತ್ತಾರೆ.

10ಕುದುರೆಯ ಶಕ್ತಿಯಲ್ಲಿ ಅವರಿಗೆ ಇಷ್ಟವಿಲ್ಲ;ಶೂರನ ಕಾಲ್ಬಲವನ್ನು ಮೆಚ್ಚುವುದಿಲ್ಲ.

11ಯೆಹೋವ ದೇವರು ತಮಗೆ ಭಯಪಡುವವರಲ್ಲಿ ಆನಂದಿಸುತ್ತಾರೆ,ತಮ್ಮ ಒಡಂಬಡಿಕೆಯ ಪ್ರೀತಿಯನ್ನು ಎದುರು ನೋಡುವವರಲ್ಲಿ ಹರ್ಷಿಸುತ್ತಾರೆ.

12ಯೆರೂಸಲೇಮೇ, ಯೆಹೋವ ದೇವರನ್ನು ಸ್ತುತಿಸು;ಚೀಯೋನೇ, ನಿಮ್ಮ ದೇವರನ್ನು ಸ್ತುತಿಸು.

13ನಿಮ್ಮ ಬಾಗಿಲುಗಳ ಅಗುಳಿಗಳನ್ನು ಬಲಗೊಳಿಸಿ,ದೇವರು ನಿಮ್ಮ ಜನರನ್ನು ಆಶೀರ್ವದಿಸುತ್ತಾರೆ.

14ದೇವರು ನಿಮ್ಮ ಮೇರೆಗಳನ್ನು ಸಮಾಧಾನಪಡಿಸುತ್ತಾರೆ;ಉತ್ತಮವಾದ ಗೋಧಿಯಿಂದ ನಿಮ್ಮನ್ನು ತೃಪ್ತಿಪಡಿಸುತ್ತಾರೆ.

15ಆಜ್ಞೆಯನ್ನು ಭೂಮಿಗೆ ಕಳುಹಿಸುತ್ತಾರೆ;ದೇವರ ವಾಕ್ಯವು ಬಹು ತೀವ್ರವಾಗಿ ಓಡುತ್ತದೆ.

16ದೇವರು ಹಿಮವನ್ನು ಉಣ್ಣೆಯ ಹಾಗೆ ಹರಡುತ್ತಾರೆ;ಮಂಜನ್ನು ಬೂದಿಯ ಹಾಗೆ ಚದರಿಸುತ್ತಾನೆ.

17ದೇವರು ನೀರುಗಡ್ಡೆಯನ್ನು ಕಲ್ಲು ಹರಳುಗಳಂತೆ ಸುರಿದು ಹಾಕುತ್ತಾರೆ;ಅವರು ಕಳುಹಿಸುವ ಚಳಿಯ ಮುಂದೆ ಯಾರು ನಿಲ್ಲುವರು?

18ದೇವರು ತಮ್ಮ ವಾಕ್ಯವನ್ನು ಕಳುಹಿಸಿ ಅವುಗಳನ್ನು ಕರಗಿಸುತ್ತಾರೆ;ದೇವರು ಗಾಳಿಯನ್ನು ಬೀಸುವಂತೆ ಮಾಡುತ್ತಾರೆ; ನೀರು ಹರಿಯುತ್ತದೆ.

19ದೇವರು ಯಾಕೋಬ್ಯರಿಗೆ ತಮ್ಮ ವಾಕ್ಯವನ್ನು ಪ್ರಕಟಿಸುತ್ತಾರೆ,ಇಸ್ರಾಯೇಲರಿಗೆ ತಮ್ಮ ತೀರ್ಪುಗಳನ್ನೂ, ತನ್ನ ನ್ಯಾಯವಿಧಿಗಳನ್ನೂ ಪ್ರಕಟಿಸುತ್ತಾರೆ.

20ಬೇರೆ ಯಾವ ಜನಾಂಗಕ್ಕಾದರೂ ದೇವರು ಹೀಗೆ ಮಾಡಲಿಲ್ಲ;ದೇವರ ನ್ಯಾಯವಿಧಿಗಳನ್ನು ಜನರು ತಿಳಿದುಕೊಳ್ಳುವುದಿಲ್ಲ.ಯೆಹೋವ ದೇವರನ್ನು ಸ್ತುತಿಸಿರಿ.

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™ ಕೃತಿಸ್ವಾಮ್ಯ © 1999, 2020, 2022 Biblica, Inc. Biblica® Open Kannada Contemporary Version™ Copyright © 1999, 2020, 2022 by Biblica, Inc.
Biblica® Open Kannada Contemporary Version 2022 · Creative Commons - Attribution-ShareAlike [CC BY-SA]