Skip to content
The Believer's Library

Biblica® Open Kannada Contemporary Version 2022

Psalms 140 OKCV

Side by side with the Father's Heart Bible™

ಸಂಗೀತ ನಿರ್ದೇಶಕನಿಗಾಗಿರುವ ಕೀರ್ತನೆ. ದಾವೀದನ ಕೀರ್ತನೆ.

1ಯೆಹೋವ ದೇವರೇ, ಕೆಡುಕರಿಂದ ನನ್ನನ್ನು ತಪ್ಪಿಸಿರಿ,ಬಲಾತ್ಕಾರಿಗಳಿಂದ ನನ್ನನ್ನು ತಪ್ಪಿಸಿ ಕಾಪಾಡಿರಿ.

2ಅವರು ಹೃದಯದಲ್ಲಿ ಕೇಡನ್ನು ಕಲ್ಪಿಸುತ್ತಾರೆ;ಅವರು ಪ್ರತಿದಿನ ಕಲಹವೆಬ್ಬಿಸುತ್ತಾರೆ.

3ತಮ್ಮ ನಾಲಿಗೆಗಳನ್ನು ಹಾವಿನ ಹಾಗೆ ಹದಮಾಡುತ್ತಾರೆ;ಸರ್ಪಗಳ ವಿಷವು ಅವರ ತುಟಿಗಳ ಕೆಳಗಿದೆ.

4ಯೆಹೋವ ದೇವರೇ, ದುಷ್ಟರ ಕೈಗಳಿಂದ ನನ್ನನ್ನು ತಪ್ಪಿಸಿ ಕಾಯಿರಿ.ಹಿಂಸಕರಿಂದ ನನ್ನನ್ನು ರಕ್ಷಿಸು,ಅವರು ನನ್ನ ಮಾರ್ಗಗಳನ್ನು ಕೆಡಿಸುವುದಕ್ಕೆ ಉದ್ದೇಶಿಸುತ್ತಾರೆ.

5ಗರ್ವಿಷ್ಠರು ನನಗೆ ಉರುಲನ್ನೂ, ಪಾಶಗಳನ್ನೂ ರಹಸ್ಯವಾಗಿ ಇಟ್ಟಿದ್ದಾರೆ;ಬಲೆಯನ್ನು ದಾರಿಯ ಅಂಚಿನಲ್ಲಿ ಹಾಸಿದ್ದಾರೆ;ನನಗೆ ಬೋನಿಟ್ಟಿದ್ದಾರೆ.

6ನಾನು ಯೆಹೋವ ದೇವರಿಗೆ ಹೀಗೆ ಹೇಳಿದೆನು,“ನೀವು ನನ್ನ ದೇವರಾಗಿದ್ದೀರಿ;ಯೆಹೋವ ದೇವರೇ, ಕರುಣೆಗಾಗಿ ಬೇಡುವ ನನ್ನ ಮೊರೆಗೆ ಕಿವಿಗೊಡಿರಿ.

7ನನ್ನ ರಕ್ಷಣೆಯ ಬಲವಾಗಿರುವ ಸಾರ್ವಭೌಮ ಯೆಹೋವ ದೇವರೇ,ನನ್ನ ತಲೆಯನ್ನು ಯುದ್ಧದ ದಿವಸದಲ್ಲಿ ಕಾಪಾಡುತ್ತೀರಿ.

8ಯೆಹೋವ ದೇವರೇ, ದುಷ್ಟರಿಗೆ ಅವರ ಇಷ್ಟಾರ್ಥವನ್ನು ಕೊಡಬೇಡಿರಿ;ಅವರು ಉನ್ನತಕ್ಕೇರುವ ಹಾಗೆ ಅವರ ಯುಕ್ತಿಯನ್ನು ಪೂರೈಸಬೇಡಿರಿ.”

9ನನ್ನನ್ನು ಸುತ್ತಿಕೊಂಡಿರುವವರ ತುಟಿಗಳ ಕೇಡು,ಅವರ ತಲೆಯ ಮೇಲೇ ಬರಲಿ.

10ಉರಿ ಕೆಂಡಗಳು ಅವರ ಮೇಲೆ ಬೀಳಲಿ;ಬೆಂಕಿಯಲ್ಲಿಯೂ ಅವರು ಏಳಲಾರದ ಹಾಗೆ,ಇತರರು ಅವರನ್ನು ಕುಣಿಯಲ್ಲಿ ಕೆಡವಲಿ.

11ಚಾಡಿಕೋರರು ದೇಶದಲ್ಲಿ ಉಳಿಯದಿರಲಿ;ಬಲಾತ್ಕಾರಿಯನ್ನು ಕೇಡು ಬೇಟೆಯಾಡಿ ಕೆಡವಲಿ.

12ಯೆಹೋವ ದೇವರು ಬಡವನಿಗೆ ವ್ಯಾಜ್ಯವನ್ನು,ಬಲಹೀನರಿಗೆ ನ್ಯಾಯವನ್ನೂ ತೀರಿಸುವರೆಂದೂ ನಾನು ಬಲ್ಲೆನು.

13ನಿಶ್ಚಯವಾಗಿ ನೀತಿವಂತರು ನಿಮ್ಮ ಹೆಸರಿಗೆ ಉಪಕಾರ ಸ್ತುತಿಯನ್ನು ಮಾಡುವರು;ಯಥಾರ್ಥರು ನಿಮ್ಮ ಸನ್ನಿಧಿಯಲ್ಲಿ ಬಾಳುವರು.

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™ ಕೃತಿಸ್ವಾಮ್ಯ © 1999, 2020, 2022 Biblica, Inc. Biblica® Open Kannada Contemporary Version™ Copyright © 1999, 2020, 2022 by Biblica, Inc.
Biblica® Open Kannada Contemporary Version 2022 · Creative Commons - Attribution-ShareAlike [CC BY-SA]