Skip to content
The Believer's Library

Indian Revised Version (IRV) Kannada - 2019

Psalms 24 IRVKan

Side by side with the Father's Heart Bible™

ದಾವೀದನ ಕೀರ್ತನೆ.

ಯೆಹೋವನ ಸನ್ನಿಧಿಯಲ್ಲಿ ಸೇರತಕ್ಕವರು

1ಭೂಮಿಯೂ ಅದರಲ್ಲಿರುವ ಸಮಸ್ತವೂ ಯೆಹೋವನದು;ಲೋಕವೂ ಮತ್ತು ಅದರ ನಿವಾಸಿಗಳೂ ಆತನವೇ.

2ಆತನೇ ಅದರ ಅಸ್ತಿವಾರವನ್ನು ಸಾಗರದ ಮೇಲೆ ಹಾಕಿದವನು;ಅದನ್ನು ಜಲರಾಶಿಗಳ ಮೇಲೆ ಸ್ಥಿರಪಡಿಸಿದವನು ಆತನೇ.

3ಯೆಹೋವನ ಪರ್ವತವನ್ನು ಹತ್ತತಕ್ಕವನು ಯಾರು?ಆತನ ಪವಿತ್ರಸ್ಥಾನದಲ್ಲಿ ಪ್ರವೇಶಿಸುವುದಕ್ಕೆ ಎಂಥವನು ಯೋಗ್ಯನು?

4ಯಾರು ಅಯೋಗ್ಯಕಾರ್ಯಗಳಲ್ಲಿ ಮನಸ್ಸಿಡದೆ,ಮೋಸ ಪ್ರಮಾಣಮಾಡದೆ,ಶುದ್ಧಹಸ್ತವೂ, ನಿರ್ಮಲಮನಸ್ಸೂ ಉಳ್ಳವನಾಗಿದ್ದಾನೋ,

5ಅವನೇ ಯೆಹೋವನಿಂದ ಶುಭವನ್ನು ಹೊಂದುವನು;ತನ್ನ ರಕ್ಷಕನಾದ ದೇವರಿಂದ ನೀತಿಫಲವನ್ನು ಪಡೆಯುವನು.

6ಇಂಥವರೇ ಆತನ ದರ್ಶನವನ್ನು ಬಯಸುವವರು.ಯಾಕೋಬ್ಯರ ದೇವರೇ, ನಿನ್ನ ಸಾನ್ನಿಧ್ಯವನ್ನು ಸೇರುವವರು ಇಂಥವರೇ. ಸೆಲಾ

7ದ್ವಾರಗಳೇ, ಉನ್ನತವಾಗಿರ್ರಿ!ಪುರಾತನವಾದ ಕದಗಳೇ ತೆರೆದುಕೊಂಡಿರ್ರಿ!ಮಹಾಮಹಿಮೆಯುಳ್ಳ ಅರಸನು ಆಗಮಿಸುತ್ತಾನೆ.

8ಮಹಾಮಹಿಮೆಯುಳ್ಳ ಈ ಅರಸನು ಯಾರು?ಮಹಾ ಬಲಿಷ್ಠನೂ, ವಿಶೇಷ ಪರಾಕ್ರಮಿಯೂ ಆಗಿರುವ ಯೆಹೋವ,ಯುದ್ಧವೀರನಾಗಿರುವ ಯೆಹೋವ.

9ದ್ವಾರಗಳೇ, ಉನ್ನತವಾಗಿರ್ರಿ!ಪುರಾತನವಾದ ಕದಗಳೇ, ತೆರೆದುಕೊಂಡಿರ್ರಿ!ಮಹಾಮಹಿಮೆಯುಳ್ಳ ಅರಸನು ಆಗಮಿಸುತ್ತಾನೆ.

10ಮಹಾಮಹಿಮೆಯುಳ್ಳ ಈ ಅರಸನು ಯಾರು?ಸೇನಾಧೀಶ್ವರನಾದ ಯೆಹೋವನೇ,ಮಹಾಮಹಿಮೆಯುಳ್ಳ ಅರಸನು ಈತನೇ. ಸೆಲಾ.

KAN-IRV Creative Commons License Indian Revised Version (IRV) - kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Indian Revised Version (IRV) Kannada - 2019 · Creative Commons - Attribution-ShareAlike [CC BY-SA]