Skip to content
The Believer's Library

Biblica® Open Kannada Contemporary Version 2022

Proverbs 10 OKCV

Side by side with the Father's Heart Bible™

ಸೊಲೊಮೋನನ ಜ್ಞಾನೋಕ್ತಿಗಳು

1ಸೊಲೊಮೋನನ ಜ್ಞಾನೋಕ್ತಿಗಳು:ಜ್ಞಾನಿಯಾದ ಮಗನು ತಂದೆಗೆ ಸಂತೋಷವನ್ನು ಉಂಟುಮಾಡುತ್ತಾನೆ.ಅಜ್ಞಾನಿಯಾದ ಮಗನಾದರೋ ತನ್ನ ತಾಯಿಗೆ ಶೋಕವನ್ನುಂಟು ಮಾಡುತ್ತಾನೆ.

2ಅನ್ಯಾಯದ ಸಂಪತ್ತುಗಳು ಶಾಶ್ವತವಲ್ಲ,ಆದರೆ ನೀತಿಯು ಮರಣದಿಂದ ಬಿಡಿಸುತ್ತದೆ.

3ನೀತಿವಂತನನ್ನು ಹಸಿವೆಯಿಂದ ಬಳಲುವಂತೆ ಯೆಹೋವ ದೇವರು ಬಿಡುವುದಿಲ್ಲ;ಆದರೆ ದುಷ್ಟರ ಆಶೆಯನ್ನು ಅವರು ಭಂಗಪಡಿಸುತ್ತಾರೆ.

4ಆಲಸ್ಯದ ಕೈ ದರಿದ್ರನನ್ನಾಗಿ ಮಾಡುವದು;ಆದರೆ ಚುರುಕಾದ ಕೈ ಐಶ್ವರ್ಯವನ್ನುಂಟು ಮಾಡುತ್ತದೆ.

5ಬೇಸಿಗೆಯಲ್ಲಿ ಫಸಲನ್ನು ಕೂಡಿಸುವವರು ಬುದ್ಧಿವಂತ ಮಕ್ಕಳು,ಸುಗ್ಗಿಯಲ್ಲಿ ನಿದ್ರೆ ಮಾಡುವವರು ನಾಚಿಕೆಗೆಟ್ಟ ಮಕ್ಕಳು.

6ನೀತಿವಂತರ ತಲೆಯ ಮೇಲೆ ಆಶೀರ್ವಾದವಿದೆ;ಆದರೆ ದುಷ್ಟರ ಬಾಯಲ್ಲಿ ಕ್ರೌರ್ಯ ಅಡಗಿದೆ.

7ನೀತಿವಂತರ ಸ್ಮರಣೆಯು ಆಶೀರ್ವಾದಕ್ಕೆ ಆಸ್ಪದ;ಆದರೆ ದುಷ್ಟನ ಹೆಸರು ಕೊಳೆಯುವುದು.

8ಜ್ಞಾನ ಹೃದಯದವರು ಆಜ್ಞೆಗಳನ್ನು ಸ್ವೀಕರಿಸುವರು;ಆದರೆ ಹರಟೆಯ ಮೂರ್ಖನು ಬೀಳುವನು.

9ಯಥಾರ್ಥ ನಡತೆಯವರು ಸುರಕ್ಷಿತವಾಗಿ ಜೀವಿಸುತ್ತಾರೆ;ಆದರೆ ವಕ್ರಮಾರ್ಗಗಳಲ್ಲಿ ನಡೆಯುವವನು ಬಯಲಿಗೆ ಬರುವನು.

10ದುರುದ್ದೇಶದಿಂದ ಕಣ್ಣು ಮಿಟಕಿಸುವವನು ದುಃಖವನ್ನು ಉಂಟುಮಾಡುತ್ತಾನೆ,ಆದರೆ ಹರಟೆಯ ಮೂರ್ಖನು ಬೀಳುವನು.

11ನೀತಿವಂತನ ಬಾಯಿಯು ಜೀವದ ಬುಗ್ಗೆ;ಆದರೆ ದುಷ್ಟನ ಬಾಯಿ ಹಿಂಸೆಯನ್ನು ಮರೆಮಾಡುತ್ತದೆ.

12ದ್ವೇಷವು ಜಗಳಗಳನ್ನು ಎಬ್ಬಿಸುತ್ತದೆ;ಆದರೆ ಪ್ರೀತಿಯು ಎಲ್ಲಾ ಪಾಪಗಳನ್ನು ಮುಚ್ಚುತ್ತದೆ.

13ವಿವೇಕವುಳ್ಳ ತುಟಿಗಳಲ್ಲಿ ಜ್ಞಾನವು ಸಿಕ್ಕುತ್ತದೆ;ವಿವೇಕವಿಲ್ಲದವನ ಬೆನ್ನಿಗೆ ಬೆತ್ತವೇ ಸರಿ.

14ಜ್ಞಾನಿಗಳು ತಿಳುವಳಿಕೆಯನ್ನು ಇಟ್ಟುಕೊಳ್ಳುತ್ತಾರೆ;ಆದರೆ ಮೂರ್ಖನ ಬಾಯಿ ವಿನಾಶವನ್ನು ಆಹ್ವಾನಿಸುತ್ತದೆ.

15ಐಶ್ವರ್ಯವಂತರಿಗೆ ಸಂಪತ್ತೇ ಅವರ ಬಲವಾದ ಕೋಟೆ;ಆದರೆ, ಬಡತನವೇ ಬಡವರ ನಾಶನಕ್ಕೆ ಕಾರಣ.

16ನೀತಿವಂತರ ದುಡಿತವು ಜೀವವಾಗುವುದು;ಆದರೆ, ದುಷ್ಟರ ಆದಾಯವು ಪಾಪ ಹಾಗು ಮರಣ.

17ಶಿಸ್ತನ್ನು ಕೈಗೊಳ್ಳುವವನು ಜೀವದ ಮಾರ್ಗವನ್ನು ತೋರಿಸುವನು;ಆದರೆ ತಿದ್ದುಪಾಟನ್ನು ತಿರಸ್ಕರಿಸುವವನು ಇತರರ ದಾರಿತಪ್ಪಿಸುವನು.

18ದ್ವೇಷವನ್ನು ಮರೆಮಾಚುವವನು ಸುಳ್ಳುಗಾರಮತ್ತು ಚಾಡಿ ಹೇಳುವವನು ಮೂರ್ಖನು.

19ಅತಿಯಾದ ಮಾತುಗಳಿಂದ ಪಾಪವು ಕೊನೆಗೊಳ್ಳುವುದಿಲ್ಲ.ಆದರೆ ಜ್ಞಾನವಂತನು ತನ್ನ ನಾಲಿಗೆಯನ್ನು ತಡೆಯುವನು.

20ನೀತಿವಂತರ ನಾಲಿಗೆಯು ಚೊಕ್ಕಬೆಳ್ಳಿಯಂತಿದೆ;ದುಷ್ಟರ ಹೃದಯವು ಬೆಲೆಯಿಲ್ಲದ್ದು.

21ನೀತಿವಂತರ ತುಟಿಗಳು ಅನೇಕರನ್ನು ಪೋಷಿಸುತ್ತವೆ,ಜ್ಞಾನದ ಕೊರತೆಯಿಂದ ಬುದ್ಧಿಹೀನರು ಸಾಯುತ್ತಾರೆ.

22ಯೆಹೋವ ದೇವರ ಆಶೀರ್ವಾದವು ಸಂಪತ್ತನ್ನು ಉಂಟುಮಾಡುವುದು;ಅವರು ಅದರೊಂದಿಗೆ ಯಾವ ದುಃಖವನ್ನೂ ಸೇರಿಸುವುದಿಲ್ಲ.

23ಮೂರ್ಖನಿಗೆ ಕೇಡು ಮಾಡುವುದರಲ್ಲಿ ಆನಂದ;ಆದರೆ ತಿಳುವಳಿಕೆಯ ವ್ಯಕ್ತಿಯು ಜ್ಞಾನದಲ್ಲಿ ಸಂತೋಷಪಡುತ್ತಾನೆ.

24ದುಷ್ಟನ ಭೀತಿಯೇ ಅವನನ್ನು ಹಿಂದಿಕ್ಕುವುದು;ಆದರೆ ನೀತಿವಂತರ ಇಷ್ಟವು ಸಫಲವಾಗುವುದು.

25ಬಿರುಗಾಳಿಯು ಬೀಸಿದರೆ, ದುಷ್ಟರು ಇಲ್ಲವಾಗುವರು;ಆದರೆ ನೀತಿವಂತರು ಶಾಶ್ವತವಾಗಿ ನಿಲ್ಲುವರು.

26ಹಲ್ಲುಗಳಿಗೆ ಹುಳಿಯೂ, ಕಣ್ಣುಗಳಿಗೆ ಹೊಗೆಯೂ ಹೇಗೋ,ಯಜಮಾನನಿಗೆ ಸೋಮಾರಿಯು ಹಾಗೆಯೇ ಇರುವನು.

27ಯೆಹೋವ ದೇವರ ಭಯವು ಜೀವನದ ದಿನಗಳನ್ನು ಹೆಚ್ಚಿಸುತ್ತದೆ;ದುಷ್ಟರ ವರ್ಷಗಳು ಕಡಿಮೆ ಆಗುವವು.

28ನೀತಿವಂತರ ನಿರೀಕ್ಷೆಯು ಆನಂದಕರವಾಗಿರುವುದು;ಆದರೆ ದುಷ್ಟರ ನಿರೀಕ್ಷೆಯು ನಾಶವಾಗುವುದು.

29ಯೆಹೋವ ದೇವರ ಮಾರ್ಗವು ನಿರ್ದೋಷಿಗಳಿಗೆ ಆಶ್ರಯವಾಗಿದೆ;ಆದರೆ ಕೇಡು ಮಾಡುವವರಿಗೆ ಅದು ವಿನಾಶಕರವಾಗಿದೆ.

30ನೀತಿವಂತರು ಎಂದಿಗೂ ಕದಲುವುದೇ ಇಲ್ಲ;ಆದರೆ ದುಷ್ಟರು ಭೂಮಿಯಲ್ಲಿ ನಿಲ್ಲುವುದಿಲ್ಲ.

31ನೀತಿವಂತರ ಬಾಯಲ್ಲಿ ಜ್ಞಾನವು ಫಲಿಸುತ್ತದೆ;ಆದರೆ ಮೂರ್ಖನ ನಾಲಿಗೆಯು ಕತ್ತರಿಸಲಾಗುವುದು.

32ಯೋಗ್ಯವಾದದ್ದು ಯಾವುದೆಂದು ನೀತಿವಂತರ ತುಟಿಗಳಿಗೆ ತಿಳಿಯುವುದು,ಆದರೆ, ದುಷ್ಟರ ಬಾಯಿ ಮೂರ್ಖತನವನ್ನೇ ಹೊರಗೆಡವುದು.

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™ ಕೃತಿಸ್ವಾಮ್ಯ © 1999, 2020, 2022 Biblica, Inc. Biblica® Open Kannada Contemporary Version™ Copyright © 1999, 2020, 2022 by Biblica, Inc.
Biblica® Open Kannada Contemporary Version 2022 · Creative Commons - Attribution-ShareAlike [CC BY-SA]