Skip to content
The Believer's Library

Biblica® Open Kannada Contemporary Version 2022

Job 24 OKCV

Side by side with the Father's Heart Bible™

1“ಸರ್ವಶಕ್ತರು ತೀರ್ಪಿನ ಕಾಲವನ್ನು ನಿಗದಿಪಡಿಸದೆ ಇರುವುದೇಕೆ?ದೇವರನ್ನು ತಿಳಿದವರು ದೇವರ ದಿನಗಳಿಗೋಸ್ಕರ ವ್ಯರ್ಥವಾಗಿ ನೋಡುತ್ತಿರುವುದು ಏಕೆ?

2ಕೆಲವರು ಗಡಿಗಳ ಕಲ್ಲುಗಳನ್ನು ಬದಲಿಸುತ್ತಾರೆ,ಕದ್ದ ಮಂದೆಗಳನ್ನು ತೆಗೆದುಕೊಂಡು ಸಾಕಿಕೊಳ್ಳುತ್ತಾರೆ.

3ದಿಕ್ಕಿಲ್ಲದವರ ಕತ್ತೆಗಳನ್ನು ಹೊಡೆದುಕೊಂಡು ಹೋಗುತ್ತಾರೆ;ವಿಧವೆಯ ಎತ್ತನ್ನು ಒತ್ತೆಯಾಗಿ ತೆಗೆದುಕೊಳ್ಳುತ್ತಾರೆ.

4ದರಿದ್ರನನ್ನು ದಾರಿಯಿಂದ ತೊಲಗಿಸುತ್ತಾರೆ;ದೇಶದ ಬಡವರು ಕೂಡ ಅವರಿಂದ ಓಡಿ ಅಡಗಿಕೊಳ್ಳುತ್ತಾರೆ.

5ಕಾಡುಕತ್ತೆಗಳ ಹಾಗೆ ಬಡವರುತಮ್ಮ ಆಹಾರಕ್ಕಾಗಿ ಅಲೆಯುತ್ತಾರೆ;ಪಾಳುಭೂಮಿಯಿಂದ ಅವರಿಗೂ, ಅವರ ಮಕ್ಕಳಿಗೂ ಆಹಾರ ಸಿಗುತ್ತದೆ.

6ಬಡವರು ಹೊಲಗಳಲ್ಲಿ ಮೇವನ್ನು ಕೊಯ್ದು,ದುಷ್ಟನ ದ್ರಾಕ್ಷಿತೋಟದಲ್ಲಿ ಹಕ್ಕಲಾಯುತ್ತಾರೆ.

7ಸಾಕಷ್ಟು ಬಟ್ಟೆ ಇಲ್ಲದೆ ಅವರು ರಾತ್ರಿಯನ್ನು ಕಳೆಯುತ್ತಾರೆ;ಚಳಿಯಲ್ಲಿ ಅವರಿಗೆ ಹೊದ್ದುಕೊಳ್ಳುವುದಕ್ಕೆ ಇಲ್ಲ.

8ಬೆಟ್ಟಗಳ ಮಳೆಯಿಂದ ನೆನೆದುಹೋಗುತ್ತಾರೆ;ಬಂಡೆಗಳಲ್ಲಿ ಆಶ್ರಯವನ್ನು ಪಡೆಯುತ್ತಾರೆ.

9ಆದರೆ ದುಷ್ಟರು ದಿಕ್ಕಿಲ್ಲದ ಶಿಶುವನ್ನು ತಾಯಿಯ ಎದೆಯಿಂದ ಕಸೆದುಕೊಳ್ಳುತ್ತಾರೆ;ಬಡವನ ಶಿಶುವನ್ನು ಒತ್ತೆಯಾಗಿ ತೆಗೆದುಕೊಳ್ಳುತ್ತಾರೆ.

10ಬಡವರೋ ಸಾಕಷ್ಟು ಬಟ್ಟೆಯಿಲ್ಲದವರಾಗಿ ಅಲೆಯುತ್ತಾರೆ;ಹಸಿದವರಾಗಿ ಸಿವುಡುಗಳನ್ನು ಹೊರುತ್ತಾರೆ.

11ಯಜಮಾನರ ಮಾಳಿಗೆಗಳ ಮೇಲೆ ಓಲಿವ್ ಎಣ್ಣೆಗಾಣಗಳನ್ನು ಆಡಿಸುತ್ತಾರೆ;ದಾಹಗೊಂಡೇ ದ್ರಾಕ್ಷೆಯ ತೊಟ್ಟಿಗಳಲ್ಲಿ ಕೆಲಸ ಮಾಡುತ್ತಾರೆ.

12ಪಟ್ಟಣದೊಳಗಿಂದ ಮನುಷ್ಯರ ನರಳುವಿಕೆಯು ಜೋರಾಗುತ್ತದೆ;ಗಾಯಪಟ್ಟವರ ಪ್ರಾಣವು ಸಹಾಯಕ್ಕಾಗಿ ಕೂಗುತ್ತದೆ;ಆದರೂ ದೇವರು ಯಾರ ಮೇಲೆಯೂ ತಪ್ಪು ಹೊರಿಸುವುದಿಲ್ಲ.

13“ಬೆಳಕಿನ ವಿರೋಧವಾಗಿ ತಿರುಗಿಬಿದ್ದವರು ಇದ್ದಾರೆ;ಅಂಥವರು ಬೆಳಕಿನ ಮಾರ್ಗಗಳನ್ನು ಅರಿಯದವರು;ಬೆಳಕಿನ ದಾರಿಗಳಲ್ಲಿ ವಾಸವಾಗಿರದವರೂ ಆಗಿದ್ದಾರೆ.

14ಕೊಲೆಗಾರನು ಮುಂಜಾನೆಯೇ ಎದ್ದು,ದಿಕ್ಕಿಲ್ಲದವರನ್ನೂ, ಬಡವರನ್ನೂ ಸಂಹರಿಸುತ್ತಾನೆ;ರಾತ್ರಿಯಲ್ಲಿ ಕಳ್ಳನಂತೆ ವರ್ತಿಸುತ್ತಾನೆ.

15ವ್ಯಭಿಚಾರಿಯು ಸಂಜೆಯನ್ನು ಎದುರುನೋಡುತ್ತಿರುವನು.ತರುವಾಯ, ‘ಯಾವ ಕಣ್ಣೂ ನನ್ನನ್ನು ನೋಡುವುದಿಲ್ಲ,’ ಎಂದು ಹೇಳುತ್ತಾನೆ;ಯಾರು ತನ್ನನ್ನು ಕಾಣದಂತೆ ಮುಖವನ್ನು ಮುಚ್ಚಿಕೊಳ್ಳುತ್ತಾನೆ.

16ಕಳ್ಳರು ಕತ್ತಲಲ್ಲಿ ಕನ್ನ ಕೊರೆದು ಮನೆಗಳೊಳಗೆ ನುಗ್ಗುತ್ತಾರೆ.ಹಗಲಿನಲ್ಲಿ ತಮ್ಮ ಮನೆಬಾಗಿಲುಗಳನ್ನು ಮುಚ್ಚಿಕೊಳ್ಳುತ್ತಾರೆ;ಅವರು ಬೆಳಕಿನಲ್ಲಿ ಏನೂ ಮಾಡಲು ಬಯಸುವುದಿಲ್ಲ.

17ಅವರೆಲ್ಲರಿಗೂ ಕಾರ್ಗತ್ತಲು ಬೆಳಕಿನಂತಿರುವುದು;ಕತ್ತಲೆಯ ಭೀತಿಯೇ ಅವರಿಗೆ ಸ್ನೇಹಿತರು.

18“ಆದರೂ ಅವರು ನೀರಿನ ಮೇಲಿನ ಗುಳ್ಳೆಯಂತೆ ಇದ್ದಾರೆ.ಅವರ ಜಮೀನು ಶಾಪಕ್ಕೆ ಒಳಪಟ್ಟಿರುವುದರಿಂದ,ಯಾರೂ ಅವರ ದ್ರಾಕ್ಷೆಯ ತೋಟಕ್ಕೆ ಹೋಗುವುದಿಲ್ಲ.

19ಬರಗಾಲದ ಬಿಸಿಲು ಹಿಮದ ನೀರನ್ನು ಹೀರಿಕೊಳ್ಳುವಂತೆ,ಪಾಪಮಾಡಿದವರನ್ನು ಸಮಾಧಿಯು ಹೀರಿಕೊಳ್ಳುತ್ತದೆ.

20ಹೆತ್ತ ಕರುಳು ಅಂಥವರನ್ನು ಮರೆತು ಬಿಡುವುದು;ಹುಳವು ಅಂಥವರ ಹೆಣವನ್ನು ರುಚಿಯಿಂದ ತಿಂದುಬಿಡುವುದು;ಇನ್ನು ಅವರ ನೆನಪು ಇರುವುದಿಲ್ಲ;ಮರದ ಹಾಗೆ ದುಷ್ಟರು ಮುರಿದುಹೋಗುವರು.

21ದುಷ್ಟರು ಆಸ್ತಿಯ ವಿಷಯದಲ್ಲಿ ಬಂಜೆಯರನ್ನು ಮೋಸಮಾಡುತ್ತಾನೆ;ದುಷ್ಟರು ವಿಧವೆಯರಿಗೆ ದಯೆ ತೋರಿಸುವುದಿಲ್ಲ.

22ಆದರೆ ದೇವರು ತಮ್ಮ ಶಕ್ತಿಯಿಂದ ಬಲಿಷ್ಠರನ್ನು ಎಳೆದೊಯ್ಯುತ್ತಾರೆ;ಬಲಿಷ್ಠರು ಉದ್ಧಾರವಾಗಿದ್ದರೂ ಅವರಿಗೆ ಜೀವನದ ಭರವಸೆ ಇಲ್ಲ.

23ಭದ್ರತೆಯಲ್ಲಿ ವಿಶ್ರಾಂತಿ ಪಡೆಯಲು ದೇವರು ಅವರಿಗೆ ಅವಕಾಶ ನೀಡಬಹುದು;ಆದರೆ ದೇವರ ಕಣ್ಣುಗಳು ಅವರ ಮಾರ್ಗಗಳ ಮೇಲಿರುವುದು.

24ಅವರು ಸ್ವಲ್ಪಕಾಲ ಉನ್ನತವಾಗಿದ್ದು ನಂತರ ಇಲ್ಲದೆ ಹೋಗುತ್ತಾರೆ;ಅವರು ಎಲ್ಲಾ ಮನುಷ್ಯರಂತೆ ಕೊಯ್ದ ತೆನೆಯ ಹಾಗೆಕೆಳಗೆ ಬಿದ್ದು ಕಾಳಿನಂತೆ ಬೇರ್ಪಡುತ್ತಾರೆ.

25“ಈ ಮಾತು ನಿಜ ಇಲ್ಲದಿದ್ದರೆ, ಯಾರು ನನ್ನನ್ನು ಸುಳ್ಳುಗಾರನನ್ನಾಗಿ ಸ್ಥಾಪಿಸಬಲ್ಲರು?ಯಾರು ನನ್ನ ಮಾತನ್ನು ವ್ಯರ್ಥಮಾಡಬಲ್ಲರು?”

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™ ಕೃತಿಸ್ವಾಮ್ಯ © 1999, 2020, 2022 Biblica, Inc. Biblica® Open Kannada Contemporary Version™ Copyright © 1999, 2020, 2022 by Biblica, Inc.
Biblica® Open Kannada Contemporary Version 2022 · Creative Commons - Attribution-ShareAlike [CC BY-SA]