Side by side with the Father's Heart Bible™ ಯೋಬನ ಕೊನೆಯ ಮಾತುಗಳು
1ಯೋಬನು ಮತ್ತೆ ತನ್ನ ಚರ್ಚೆಯನ್ನು ಮುಂದುವರಿಸಿ ಹೇಳಿದ್ದೇನೆಂದರೆ:
2ನನ್ನ ನ್ಯಾಯವನ್ನು ತಪ್ಪಿಸಿದ ಜೀವಂತ ದೇವರಾಣೆ,ನನ್ನ ಆತ್ಮವನ್ನು ವ್ಯಥೆಪಡಿಸಿರುವ ಸರ್ವಶಕ್ತರ ಆಣೆ,
3“ನನ್ನಲ್ಲಿ ಜೀವವು ಇನ್ನೂ ಪೂರ್ಣವಾಗಿದೆ;ದೇವರು ಊದಿದ ಶ್ವಾಸವು ನನ್ನ ಮೂಗಿನಲ್ಲಿ ಆಡುತ್ತಿದೆ.
4ನನ್ನ ತುಟಿಗಳು ಸುಳ್ಳನ್ನು ನುಡಿಯುವುದೇ ಇಲ್ಲ.ನನ್ನ ನಾಲಿಗೆಯು ಎಷ್ಟು ಮಾತ್ರಕ್ಕೂ ಮೋಸದ ಮಾತುಗಳನ್ನಾಡುವುದಿಲ್ಲ.
5ನೀವು ನ್ಯಾಯವಂತರೆಂದು ನಾನು ಒಪ್ಪುವುದಿಲ್ಲ;ನಾನು ಸಾಯುವ ತನಕ, ನನ್ನ ಪ್ರಾಮಾಣಿಕತ್ವವನ್ನು ಬಿಡುವುದಿಲ್ಲ.
6ನನ್ನ ನಿಷ್ಕಪಟತೆಯನ್ನು ದೃಢವಾಗಿ ಹಿಡುಕೊಂಡಿದ್ದೇನೆ;ಅದನ್ನು ಎಂದಿಗೂ ನಾನು ಹೋಗಗೊಡಿಸುವುದಿಲ್ಲ;ನಾನು ಜೀವಂತವಾಗಿ ಇರುವವರೆಗೂ ನನ್ನ ಮನಸ್ಸಾಕ್ಷಿಯು ನನ್ನನ್ನು ನಿಂದಿಸುವುದಿಲ್ಲ.
7“ನನ್ನ ಶತ್ರು ದುಷ್ಟನ ಹಾಗಿರಲಿ;ನನ್ನ ವಿರುದ್ಧ ಏಳುವವನು ಅನ್ಯಾಯವಂತನ ಹಾಗಿರಲಿ.
8ದೇವರು ಭಕ್ತಿಹೀನನನ್ನು ಕಡಿದುಬಿಟ್ಟರೆ, ಅವನ ಪ್ರಾಣ ತೆಗೆದುಕೊಂಡರೆ,ಅವನಿಗೆ ನಿರೀಕ್ಷೆ ಎಲ್ಲಿ?
9ಭಕ್ತಿಹೀನನಿಗೆ ಯಾತನೆ ಬಂದರೆ,ದೇವರು ಅವನ ಮೊರೆಯನ್ನು ಕೇಳುವರೋ?
10ಭಕ್ತಿಹೀನನು ಸರ್ವಶಕ್ತರಲ್ಲಿ ಆನಂದವಾಗಿರುವನೋ?ಸರ್ವಕಾಲದಲ್ಲಿಯೂ ದೇವರನ್ನು ಕರೆಯುವನೋ?
11“ನಾನು ದೇವರ ಶಕ್ತಿಯ ಬಗ್ಗೆ ನಿಮಗೆ ಬೋಧಿಸುವೆನು;ಸರ್ವಶಕ್ತರ ಮಾರ್ಗಗಳನ್ನು ನಾನು ಮರೆಮಾಡೆನು.
12ನೀವೆಲ್ಲರೂ ಇದನ್ನು ನೋಡಿದ್ದರೂ,ಮತ್ತೆ ಏಕೆ ಈ ಪ್ರಕಾರ ವ್ಯರ್ಥವಾಗಿ ವಾದಿಸುತ್ತೀರಿ?
13“ಇದು ದುಷ್ಟರಿಗೆ ದೇವರಿಂದ ಬಂದ ಪಾಲಾಗಿದೆ;ಹಿಂಸಕರಿಗೆ ಸರ್ವಶಕ್ತರಿಂದ ಹೊಂದುವ ಪಾಲು ಹೀಗಿರುತ್ತವೆ:
14ಅವರ ಮಕ್ಕಳು ಹೆಚ್ಚಿದರೂ ಖಡ್ಗಕ್ಕೆ ಗುರಿಯಾಗುವರು;ಅವರ ಸಂತತಿಯವರಿಗೆ ಆಹಾರದ ಕೊರತೆ ಇರುವುದು.
15ಅವರ ಮನೆಯಲ್ಲಿ ಯಾರಾದರೂ ಉಳಿದರೆ, ವ್ಯಾಧಿಯಿಂದ ಸತ್ತು ಸಮಾಧಿ ಸೇರುವರು;ಅವರ ವಿಧವೆಯರು ದುಃಖಕ್ರಿಯೆಗಳನ್ನು ನೆರವೇರಿಸುವುದಿಲ್ಲ.
16ದುಷ್ಟರು ಧೂಳಿನಂತೆ ಬೆಳ್ಳಿಯನ್ನು ಕೂಡಿಸಿಟ್ಟಿದ್ದರೂ,ಮಣ್ಣಿನಂತೆ ವಸ್ತ್ರಗಳನ್ನು ಸಿದ್ಧಮಾಡಿಕೊಂಡಿದ್ದರೂ,
17ಅವರು ಕೂಡಿಸಿಟ್ಟಿದ್ದನ್ನು ನೀತಿವಂತರು ಹಂಚಿಕೊಳ್ಳುವರು;ಅವರ ಬೆಳ್ಳಿಯನ್ನು ನಿರ್ದೋಷಿಗಳು ಹಂಚಿಕೊಳ್ಳುವರು.
18ದುಷ್ಟರು ಕಟ್ಟಿಕೊಂಡ ಮನೆಯು ಜೇಡ ಹುಳದ ಗೂಡಿನಂತೆಯೂ,ಕಾವಲುಗಾರನ ಗುಡಿಸಿಲಂತೆಯೂ ದುರ್ಬಲವಾಗಿರುವುದು.
19ದುಷ್ಟರು ಧನಿಕರಾಗಿ ನಿದ್ರಿಸಿದರೂ ಮತ್ತೆ ನಿದ್ರೆಬಾರದು;ಅವರು ತಮ್ಮ ಕಣ್ಣನ್ನು ತೆರೆಯುತ್ತಲೇ ಆಸ್ತಿ ಇಲ್ಲವಾಗಿರುವುದು.
20ವಿಪತ್ತುಗಳು ಪ್ರವಾಹದಂತೆ ಅಂಥವರನ್ನು ಹಿಡಿಯುವುವು;ರಾತ್ರಿಯಲ್ಲಿ ಬಿರುಗಾಳಿ ಅಂಥವರನ್ನು ಅಪಹರಿಸುವುದು.
21ಪೂರ್ವದಿಕ್ಕಿನ ಗಾಳಿ ದುಷ್ಟರನ್ನು ಬಡಿಯಲು, ಅವರು ಕೊಚ್ಚಿಕೊಂಡು ಹೋಗುವರು;ಅದು ಅವರನ್ನು ಅವರ ಸ್ಥಳದಿಂದ ಹಾರಿಸಿಬಿಡುವುದು.
22ಆ ಗಾಳಿಯು ಕರುಣೆ ಇಲ್ಲದೆ ದುಷ್ಟರ ಮೇಲೆ ಬೀಸಲು,ಅವರು ಅದರ ಶಕ್ತಿಯಿಂದ ತಪ್ಪಿಸಿಕೊಳ್ಳಲು ಯತ್ನಿಸುವರು.
23ಕೊನೆಗೆ ಜನರು ದುಷ್ಟರ ಕಡೆಗೆ ಅಪಹಾಸ್ಯದಿಂದ ಚಪ್ಪಾಳೆ ತಟ್ಟುವರು;ಅನಂತರ ಅವರ ಸ್ಥಳದೊಳಗಿಂದ ಅವರನ್ನು ಹೊರಹಾಕುವರು.”