Skip to content
The Believer's Library

Biblica® Open Kannada Contemporary Version 2022

Job 16 OKCV

Side by side with the Father's Heart Bible™

ಯೋಬನ ಉತ್ತರ

1ಯೋಬನು ಉತ್ತರಕೊಟ್ಟು ಹೇಳಿದ್ದೇನೆಂದರೆ:

2“ನಾನು ಇವುಗಳ ಹಾಗೆ ಅನೇಕ ಮಾತುಗಳನ್ನು ಕೇಳಿದ್ದೇನೆ;ನೀವೆಲ್ಲರೂ ಆದರಣೆ ಕೊಡುವವರಲ್ಲ, ಬಾಧಿಸುವವರೇ.

3ನಿಮ್ಮ ವ್ಯರ್ಥ ಮಾತುಗಳಿಗೆ ಅಂತ್ಯ ಇಲ್ಲವೋ?ನನ್ನೊಂದಿಗೆ ವಾದಿಸಲು ನಿಮ್ಮನ್ನು ಒತ್ತಾಯಪಡಿಸಿದ್ದೇನು?

4ನೀವು ನನ್ನ ಸ್ಥಿತಿಯಲ್ಲಿ ಇದ್ದಿದ್ದರೆ,ನಾನು ಸಹ ನಿಮ್ಮ ಹಾಗೆ ಮಾತಾಡುತ್ತಿದ್ದೆ;ನಾನು ನಿಮ್ಮ ವಿರುದ್ಧ ಪದಪ್ರಯೋಗಿಸಿ ಮಾತಾಡಬಹುದಾಗಿತ್ತು;ಹೌದು, ನಿಮ್ಮ ವಿಷಯದಲ್ಲಿ ಗೇಲಿ ಮಾಡುತ್ತಾ, ನಾನು ನನ್ನ ತಲೆಯಾಡಿಸಬಹುದಾಗಿತ್ತು.

5ಆದರೆ, ನಾನು ನನ್ನ ಬಾಯಿಮಾತಿನಿಂದ ನಿಮ್ಮನ್ನು ಪ್ರೋತ್ಸಾಹಿಸುವೆನು;ನನ್ನ ಆದರಣೆಯ ಮಾತುಗಳು ನಿಮಗೆ ಉಪಶಮನ ಮಾಡುವುದು.

6“ನಾನು ಮಾತನಾಡಿದರೂ ನನ್ನ ನೋವಿಗೆ ಉಪಶಮನವಾಗುವುದಿಲ್ಲ;ನಾನು ಮೌನವಾಗಿದ್ದರೂ, ನನ್ನ ನೋವು ನಿವಾರಣೆಯಾಗುವುದಿಲ್ಲ.

7ದೇವರೇ, ನೀವು ನನ್ನನ್ನು ಬಲಹೀನಪಡಿಸಿದ್ದೀರಿ;ನೀವು ನನ್ನ ಕುಟುಂಬದವರನ್ನೆಲ್ಲಾ ಇಲ್ಲದಂತೆ ಮಾಡಿದ್ದೀರಿ.

8ನೀವು ನನ್ನ ಮುಖವೆಲ್ಲಾ ಸುಕ್ಕುಗಳಿಂದ ತುಂಬಿಸಿದ್ದೀರಿ;ನನ್ನ ಬಿಕ್ಕಟ್ಟೇ ನನಗೆ ವಿರೋಧವಾಗಿ ಎದ್ದು ಸಾಕ್ಷಿ ಕೊಡುತ್ತವೆ;

9ದೇವರು ತಮ್ಮ ಬೇಸರದಲ್ಲಿ ನನ್ನನ್ನು ದಂಡಿಸಿದ್ದಾರೆ;ನನ್ನ ದೇವರು ನನ್ನ ಮೇಲೆ ಅತೃಪ್ತರಾಗಿದ್ದಾರೆ;ನನ್ನ ವೈರಿಯು ನನ್ನನ್ನು ದ್ವೇಷದಿಂದ ನೋಡುತ್ತಿದ್ದಾನೆ.

10ನನ್ನ ಮೇಲೆ ಜನರು ತಮ್ಮ ಬಾಯಿ ಕಿಸಿಯುತ್ತಾರೆ;ನಿಂದಿಸಿ ನನ್ನ ಕೆನ್ನೆಗಳನ್ನು ಬಡಿಯುತ್ತಾರೆ,ನನಗೆ ವಿರೋಧವಾಗಿ ಕೂಡಿಕೊಳ್ಳುತ್ತಾರೆ.

11ದೇವರು ನನ್ನನ್ನು ದುಷ್ಟರ ಕೈಗೆ ಒಪ್ಪಿಸಿಬಿಟ್ಟಿದ್ದಾರೆ;ಹೌದು, ದುಷ್ಟರ ಕೈಗೆ ನನ್ನನ್ನು ಎಸೆದುಬಿಟ್ಟಿದ್ದಾರೆ.

12ನಾನು ನೆಮ್ಮದಿಯಿಂದ ಇದ್ದಾಗ ದೇವರು ನನ್ನನ್ನು ಚದರಿಸಿದ್ದಾರೆ;ನಾನು ಮಡಕೆ ಒಡೆದುಬಿದ್ದಂತೆ ಇದ್ದೇನೆ.ನನ್ನನ್ನು ತಮಗೆ ಗುರಿ ಹಲಗೆಯಾಗಿ ನಿಲ್ಲಿಸಿಕೊಂಡಿದ್ದಾರೆ.

13ದೇವರ ಬಾಣಗಳು ನನ್ನನ್ನು ಸುತ್ತುವರಿದಿವೆ;ನಾನು ಕರುಣೆಯಿಲ್ಲದೆ ನೆಲದ ಮೇಲೆ ಪಿತ್ತವನ್ನು ಸುರಿದು ಬಿದ್ದವನಂತೆ ಇದ್ದೇನೆ.ನನ್ನ ಪಿತ್ತವನ್ನು ಭೂಮಿಗೆ ಚೆಲ್ಲುತ್ತಾರೆ.

14ದೇವರು ಮತ್ತೆ ಮತ್ತೆ ನನ್ನನ್ನು ಮುರಿಯುತ್ತಿದ್ದಾರೆ;ಅದು ಶೂರನು ಓಡಿಬಂದು ನನ್ನ ಮೇಲೆ ದಾಳಿಮಾಡಿದಂತಿದೆ.

15“ನಾನು ಗೋಣಿತಟ್ಟು ಹೊಲಿದು ನನ್ನ ಮೈಮೇಲೆ ಹಾಕಿಕೊಂಡಿದ್ದೇನೆ;ನನ್ನ ಗೌರವವನ್ನು ಧೂಳಿನಲ್ಲಿ ಮರೆಮಾಡಿದ್ದೇನೆ.

16ನನ್ನ ಮುಖವು ಅಳುವುದರಿಂದ ಕೆಂಪಾಯಿತು;ನನ್ನ ರೆಪ್ಪೆಗಳ ಮೇಲೆ ಮರಣದ ಅಂಧಕಾರವು ಕವಿದಿದೆ.

17ಆದರೂ ನನ್ನ ಕೈಗಳಲ್ಲಿ ಹಿಂಸಾಚಾರವಿಲ್ಲ;ನನ್ನ ಪ್ರಾರ್ಥನೆಯು ಶುದ್ಧವಾಗಿದೆ.

18“ಭೂಮಿಯೇ, ನನ್ನ ರಕ್ತವನ್ನು ಮುಚ್ಚಬೇಡ,ನನ್ನ ಕೂಗು ವಿಶ್ರಾಂತಿ ಹೊಂದದಿರಲಿ!

19ಈಗಲೂ ಪರಲೋಕದಲ್ಲಿ ನನಗೆ ಒಬ್ಬ ಸಾಕ್ಷಿ ಇದ್ದಾರೆ;ಹೌದು, ನನ್ನ ವಕೀಲರು ಉನ್ನತದಲ್ಲಿದ್ದಾರೆ.

20ಆದರೆ ನನ್ನ ಮಿತ್ರ ನನಗಾಗಿ ವಿಜ್ಞಾಪನೆಮಾಡುತ್ತಿದ್ದಾರೆ;ನನ್ನ ಕಣ್ಣುಗಳು ದೇವರ ಮುಂದೆ ಕಣ್ಣೀರು ಸುರಿಸುತ್ತವೆ.

21ಒಬ್ಬ ಮನುಷ್ಯನು ತನ್ನ ಮಿತ್ರನಿಗೋಸ್ಕರ ಬೇಡಿಕೊಳ್ಳುವಂತೆ,ಅವರು ಸಹ ಮನುಷ್ಯನಿಗಾಗಿ ದೇವರ ಮುಂದೆ ವಾದಿಸುತ್ತಿದ್ದಾರೆ.

22“ನಾನು ಹಿಂದಿರುಗಿ ಬಾರದ ದಾರಿಯನ್ನು ಹಿಡಿಯಲು,ಇನ್ನೂ ಕೆಲವೇ ವರ್ಷಗಳು ಉಳಿದಿವೆ.

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™ ಕೃತಿಸ್ವಾಮ್ಯ © 1999, 2020, 2022 Biblica, Inc. Biblica® Open Kannada Contemporary Version™ Copyright © 1999, 2020, 2022 by Biblica, Inc.
Biblica® Open Kannada Contemporary Version 2022 · Creative Commons - Attribution-ShareAlike [CC BY-SA]