Skip to content
The Believer's Library

Biblica® Open Kannada Contemporary Version 2022

Job 14 OKCV

Side by side with the Father's Heart Bible™

1“ಸ್ತ್ರೀಯಿಂದ ಹುಟ್ಟಿದ ಮನುಷ್ಯನು ಅಲ್ಪಾಯುಷ್ಯನೂ,ಕಷ್ಟಸಂಕಟಗಳಿಂದ ತುಂಬಿದವನೂ ಆಗಿದ್ದಾನೆ.

2ಅವನು ಹೂವಿನ ಹಾಗೆ ಅರಳಿ ಬಾಡುವನು;ಅವನು ನೆರಳಿನಂತೆ ಓಡಿಹೋಗುತ್ತಾನೆ, ಶಾಶ್ವತವಾಗಿರುವದಿಲ್ಲ.

3ಹಾಗಾದರೆ ಇಂಥವನ ಮೇಲೆ ದೇವರೇ, ನೀವು ನಿಮ್ಮ ಕಣ್ಣಿಟ್ಟೀದೀರಲ್ಲಾ?ನಿಮ್ಮ ನ್ಯಾಯಸ್ಥಾನಕ್ಕೆ ನನ್ನನ್ನು ಬರಮಾಡುತ್ತೀರೋ?

4ಅಶುದ್ಧತೆಯಿಂದ ಶುದ್ಧವಾದದ್ದನ್ನು ತರುವವನು ಯಾರು?ಯಾರೂ ತರಲಾರರು!

5ಮನುಷ್ಯನ ದಿನಗಳು ಇಷ್ಟೇ ಎಂದು ತೀರ್ಮಾನವಾಗಿದೆ;ಅವನ ತಿಂಗಳುಗಳ ಲೆಕ್ಕ ದೇವರೇ ನಿಮ್ಮ ಬಳಿಯಲ್ಲಿ ಇದೆ;ಅವನು ದಾಟಲಾರದ ಹಾಗೆ ಅವನಿಗೆ ಮೇರೆಗಳನ್ನು ನೇಮಿಸಿದ್ದೀರಿ.

6ಆದ್ದರಿಂದ ಅವನು ವಿಶ್ರಾಂತಿ ಪಡೆಯಲೆಂದುನಿಮ್ಮ ದೃಷ್ಟಿಯನ್ನು ಅವನ ಕಡೆಯಿಂದ ತಿರುಗಿಸಿಬಿಡಿರಿ;ಅವನು ಕೂಲಿಯವನಿಗಿರುವಷ್ಟು ಸಂತೋಷದಿಂದಾದರೂ ತನ್ನ ದಿನವನ್ನು ಕಳೆಯಲಿ.

7“ಮರಕ್ಕೆ ಸಹ ಒಂದು ನಿರೀಕ್ಷೆ ಇದೆ:ಅದೇನೆಂದರೆ, ಮರವನ್ನು ಕಡಿದು ಹಾಕಿದರೂತಾನು ಮತ್ತೆ ಚಿಗುರುವೆನೆಂಬ ನಿರೀಕ್ಷೆ ಅದಕ್ಕಿದೆ;ಚಿಗುರುವುದನ್ನು ಆ ಮರವು ನಿಲ್ಲಿಸುವುದೇ ಇಲ್ಲ.

8ಅದರ ಬೇರು ಭೂಮಿಯಲ್ಲಿ ಹಳೆಯದಾದರೂ,ನೆಲದಲ್ಲಿ ಅದರ ಬುಡ ಸತ್ತಿದ್ದರೂ,

9ನೀರಿನ ವಾಸನೆಯಿಂದ ಅದು ಮೊಳೆತು,ಗಿಡದ ಹಾಗೆ ಅದು ಕೊಂಬೆಗಳನ್ನು ಬಿಡುವುದು.

10ಆದರೆ ಮನುಷ್ಯನು ಸತ್ತು ಬಿದ್ದಿರುತ್ತಾನೆ;ಅವನು ಕೊನೆಯುಸಿರೆಳೆದಾಗ ಅವನ ಅಂತ್ಯವಾಗುತ್ತದೆ.

11ಸರೋವರದ ನೀರು ಒಣಗಿ ಹೋಗುವಂತೆಯೂ,ಬರಗಾಲದಲ್ಲಿ ನದಿಗಳು ಬತ್ತಿಹೋಗುವಂತೆಯೂ,

12ಮನುಷ್ಯನು ಸತ್ತು ಮಲಗಿದರೆ ಏಳುವುದೇ ಇಲ್ಲ;ಆಕಾಶಗಳು ಅಳಿದು ಹೋಗುವವರೆಗೆ ಅವನು ಎಚ್ಚರಗೊಳ್ಳುವುದಿಲ್ಲ;ನಿದ್ರೆಯಿಂದ ಎಬ್ಬಿಸಲಾಗುವುದೂ ಇಲ್ಲ.

13“ದೇವರೇ, ನೀವು ನನ್ನನ್ನು ಸಮಾಧಿಯಲ್ಲಿ ಮರೆಮಾಡಿ,ನಿಮ್ಮ ಶಿಕ್ಷೆ ಮುಗಿಯುವವರೆಗೂ ನನ್ನನ್ನು ಅಡಗಿಸಿರಿ!ನೀವು ನನಗೆ ಒಂದು ಕಾಲವನ್ನು ನಿಗದಿಪಡಿಸಿ,ಅನಂತರ ನನ್ನನ್ನು ಜ್ಞಾಪಕಮಾಡಿಕೊಂಡರೆ ಲೇಸು!

14ಒಬ್ಬ ಮನುಷ್ಯನು ಸತ್ತರೆ ಅವನು ತಿರುಗಿ ಬದುಕುವನೋ?ಆದರೂ ನನಗೆ ನೇಮಕ ಮಾಡಿದ ಪರಿಶ್ರಮದ ದಿನವೆಲ್ಲಾ,ನನಗೆ ಬಿಡುಗಡೆಯಾಗುವವರೆಗೆ ನಾನು ಕಾದುಕೊಂಡಿರುವೆನು.

15ದೇವರೇ, ನೀವು ನನ್ನನ್ನು ಕರೆಯುವಿರಿ, ನಾನು ನಿಮಗೆ ಉತ್ತರಕೊಡುವೆನು;ನಿಮ್ಮ ಈ ಸೃಷ್ಟಿಯ ಮೇಲೆ ನೀವು ಹಂಬಲಿಸುವಿರಿ.

16ಆಗ ನೀವು ನನ್ನ ಹೆಜ್ಜೆಗಳನ್ನು ಲೆಕ್ಕಿಸುವಿರಿ;ಆದರೆ ನೀವು ನನ್ನ ಪಾಪದ ಬಗ್ಗೆ ದಾಖಲೆ ಇಡುವುದಿಲ್ಲ.

17ನನ್ನ ಅಪರಾಧಗಳನ್ನು ಮೂಟೆಕಟ್ಟಿ ಮುದ್ರೆ ಹಾಕಿಬಿಡುವಿರಿ;ನೀವು ನನ್ನ ಅನ್ಯಾಯವನ್ನು ಮರೆಮಾಡುವಿರಿ.

18“ಆದರೂ ಬೆಟ್ಟವು ಬಿದ್ದು ಹಾಳಾಗುವಂತೆಯೂ,ಬಂಡೆಯು ತನ್ನ ಸ್ಥಳದಿಂದ ತೊಲಗುವಂತೆಯೂ,

19ನೀರು ಕಲ್ಲುಗಳನ್ನು ಸವೆಯಿಸುವಂತೆಯೂ,ಪ್ರವಾಹಗಳು ಭೂಮಿಯ ಮಣ್ಣನ್ನು ಕೊಚ್ಚಿಕೊಂಡು ಹೋಗುವಂತೆಯೂ,ಮನುಷ್ಯನ ನಿರೀಕ್ಷೆಯನ್ನು ನೀವು ನಾಶಮಾಡುತ್ತೀರಿ.

20ನೀವು ಅವನ ಮೇಲೆ ಶಾಶ್ವತವಾಗಿ ಮೇಲುಗೈ ಸಾಧಿಸಿರುವದರಿಂದ ಅವನು ಹೊರಟು ಹೋಗುವನು;ನೀವು ಅವನ ಮುಖಭಾವವನ್ನು ಮಾರ್ಪಡಿಸಿ, ಅವನನ್ನು ಕಳುಹಿಸಿಬಿಡುತ್ತೀರಿ.

21ಮಕ್ಕಳು ಘನತೆಯನ್ನು ಹೊಂದಿದರೆ, ಅದು ಸತ್ತವರಿಗೆ ತಿಳಿಯುವುದಿಲ್ಲ;ಅವರ ಮಕ್ಕಳು ಕಡಿಮೆ ಸ್ಥಿತಿಗೆ ಬಂದರೆ ಸಹ, ಅದನ್ನು ಸತ್ತವರು ಗ್ರಹಿಸಿಕೊಳ್ಳುವುದಿಲ್ಲ.

22ಆದರೆ ಸತ್ತವರು ತಮ್ಮ ದೇಹದ ನೋವನ್ನು ಅನುಭವಿಸುವರು,ಅವರ ಆತ್ಮವು ಅವರಿಗಾಗಿ ಮಾತ್ರ ಪ್ರಲಾಪಿಸುತ್ತಿರುವುದು.”

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™ ಕೃತಿಸ್ವಾಮ್ಯ © 1999, 2020, 2022 Biblica, Inc. Biblica® Open Kannada Contemporary Version™ Copyright © 1999, 2020, 2022 by Biblica, Inc.
Biblica® Open Kannada Contemporary Version 2022 · Creative Commons - Attribution-ShareAlike [CC BY-SA]