Skip to content
The Believer's Library

Biblica® Open Kannada Contemporary Version 2022

James 2 OKCV

Side by side with the Father's Heart Bible™

ಪಕ್ಷಪಾತವನ್ನು ಕುರಿತದ್ದು

1ನನ್ನ ಪ್ರಿಯರೇ, ಮಹಿಮೆಯುಳ್ಳ ನಮ್ಮ ಕರ್ತ ಆಗಿರುವ ಯೇಸು ಕ್ರಿಸ್ತರಲ್ಲಿ ವಿಶ್ವಾಸಿಗಳಾಗಿರುವ ನೀವು ಪಕ್ಷಪಾತಿಗಳಾಗಿರಬಾರದು. 2ಹೇಗೆಂದರೆ ಒಬ್ಬ ಮನುಷ್ಯನು ಚಿನ್ನದ ಉಂಗುರವನ್ನೂ ಅಂದವಾದ ವಸ್ತ್ರವನ್ನೂ ಹಾಕಿಕೊಂಡು ನಿಮ್ಮ ಸಭೆಯೊಳಗೆ ಬರಲು ಮತ್ತು ಒಬ್ಬ ಬಡ ಮನುಷ್ಯನು ಹರಕು ಬಟ್ಟೆ ಹಾಕಿಕೊಂಡು ಬರಲು 3ನೀವು ಹೊಳೆಯುವ ವಸ್ತ್ರಗಳನ್ನು ಧರಿಸಿಕೊಂಡಿರುವವನನ್ನು ಗೌರವಿಸಿ ಆ ವ್ಯಕ್ತಿಗೆ, “ನೀವು ಇಲ್ಲಿಯ ಗೌರವ ಪೀಠದಲ್ಲಿ ಕುಳಿತುಕೊಳ್ಳಿರಿ,” ಎಂತಲೂ ಆ ಬಡವನಿಗೆ, “ನೀನು ಅಲ್ಲಿ ನಿಂತುಕೋ ಇಲ್ಲವೆ ಇಲ್ಲಿ ನನ್ನ ಕಾಲ್ಮಣೆಯ ಬಳಿ ಕುಳಿತುಕೋ,” ಎಂತಲೂ ಹೇಳಿದರೆ, 4ನೀವು ಪಕ್ಷಪಾತಿಗಳಾಗಿ ಕೆಟ್ಟ ಆಲೋಚನೆಗಳ ನ್ಯಾಯಾಧಿಪತಿಗಳಾಗಿರುತ್ತೀರಲ್ಲವೇ?

5ನನ್ನ ಪ್ರಿಯರೇ, ಕೇಳಿರಿ, ದೇವರು ಈ ಲೋಕದ ಬಡವರನ್ನು ನಂಬಿಕೆಯಲ್ಲಿ ಐಶ್ವರ್ಯವಂತರನ್ನಾಗಿಯೂ ತಮ್ಮನ್ನು ಪ್ರೀತಿಸುವವರಿಗೆ ತಾವು ವಾಗ್ದಾನಮಾಡಿದ ರಾಜ್ಯಕ್ಕೆ ಬಾಧ್ಯರನ್ನಾಗಿಯೂ ಇರಬೇಕೆಂದು ಆರಿಸಿಕೊಳ್ಳಲಿಲ್ಲವೇ? 6ನೀವಾದರೋ ಬಡವರನ್ನು ಅವಮಾನ ಪಡಿಸಿದ್ದೀರಿ. ನಿಮ್ಮನ್ನು ಬಾಧಿಸಿ ನ್ಯಾಯಸ್ಥಾನಗಳ ಮುಂದೆ ಎಳೆದುಕೊಂಡು ಹೋಗುವವರು ಐಶ್ವರ್ಯವಂತರಲ್ಲವೋ? 7ನೀವು ಕರೆಸಿಕೊಳ್ಳುವ ಆ ಯೋಗ್ಯವಾದ ನಾಮವನ್ನು ದೂಷಿಸುವವರು ಅವರಲ್ಲವೇ?

8“ನಿನ್ನ ನೆರೆಯವನನ್ನು ನಿನ್ನಂತೆಯೇ ಪ್ರೀತಿಸಬೇಕು!” ಎಂದು ಪವಿತ್ರ ವೇದದಲ್ಲಿ ಬರೆದಿದೆ. ಈ ರಾಜಾಜ್ಞೆಯನ್ನು ನೆರವೇರಿಸುವವರಾದರೆ ನೀವು ಉತ್ತಮವಾದದ್ದನ್ನು ಮಾಡುವವರಾಗಿರುವಿರಿ. 9ನೀವು ಪಕ್ಷಪಾತಿಗಳಾಗಿದ್ದರೆ ಪಾಪಮಾಡುವವರಾಗಿದ್ದೀರಿ. ಮಾತ್ರವಲ್ಲದೆ ಮೋಶೆಯ ನಿಯಮದ ಪ್ರಕಾರ ಅಪರಾಧಿಗಳೆಂದು ನಿರ್ಣಯ ಹೊಂದುತ್ತೀರಿ. 10ಏಕೆಂದರೆ ಯಾವನಾದರೂ ಇಡೀ ಮೋಶೆಯ ನಿಯಮದಲ್ಲಿ ಒಂದೇ ಒಂದನ್ನು ಕೈಕೊಂಡು ನಡೆಯದೇ ಹೋದರೆ, ಅವನು ಇಡೀ ನಿಯಮವನ್ನೇ ಕೈಕೊಳ್ಳದ ಅಪರಾಧಿಯಾಗುತ್ತಾನೆ. 11ಏಕೆಂದರೆ, “ವ್ಯಭಿಚಾರ ಮಾಡಬಾರದು,” ಎಂದು ಹೇಳಿದ ದೇವರೇ, “ನರಹತ್ಯೆ ಮಾಡಬಾರದು,” ಎಂತಲೂ ಹೇಳಿದರು. ಆದಕಾರಣ ನೀನು ವ್ಯಭಿಚಾರ ಮಾಡದೆ ಇದ್ದರೂ ನರಹತ್ಯೆ ಮಾಡಿದರೆ ನಿಯಮವನ್ನು ಮೀರಿದವನಾದೆ.

12ಸ್ವಾತಂತ್ರ್ಯವನ್ನು ಉಂಟುಮಾಡುವ ನಿಯಮದಿಂದ ನಾವು ತೀರ್ಪುಹೊಂದುವೆವು ಎಂದು ತಿಳಿದು, ನಮ್ಮ ಮಾತುಗಳೂ ಕೃತ್ಯಗಳೂ ಅದಕ್ಕೆ ಅನುಸಾರವಾಗಿರಲಿ. 13ಕರುಣೆ ತೋರಿಸದೆ ಇರುವವರಿಗೆ ಕರುಣೆಯಿಲ್ಲದ ನ್ಯಾಯತೀರ್ಪಾಗುವುದು. ಕರುಣೆವುಳ್ಳವರೋ ನ್ಯಾಯತೀರ್ಪಿನ ಮೇಲೆಯೇ ವಿಜಯವನ್ನು ಸಾಧಿಸುವರು.

ನಂಬಿಕೆಯೂ ಸತ್ಕಾರ್ಯವೂ

14ನನ್ನ ಪ್ರಿಯರೇ, ಒಬ್ಬನು ತನಗೆ ನಂಬಿಕೆಯುಂಟೆಂದು ಹೇಳಿಕೊಂಡು ಕ್ರಿಯೆಗಳಿಲ್ಲದವನಾಗಿದ್ದರೆ ಪ್ರಯೋಜನವೇನು? ಅಂಥ ನಂಬಿಕೆಯು ಅವನನ್ನು ರಕ್ಷಿಸುವುದೋ? 15ಒಬ್ಬ ಸಹೋದರನಿಗೆ ಇಲ್ಲವೆ ಒಬ್ಬ ಸಹೋದರಿಗೆ ಬಟ್ಟೆಯೂ ದಿನದ ಆಹಾರವೂ ಇಲ್ಲದಿರುವಾಗ, 16ನಿಮ್ಮಲ್ಲಿ ಒಬ್ಬನು ಅವನಿಗೆ ದೇಹಕ್ಕೆ ಬೇಕಾದವುಗಳನ್ನು ಕೊಡದೆ, “ಸಮಾಧಾನದಿಂದ ಹೋಗಿರಿ, ಚಳಿ ಕಾಯಿಸಿಕೊಳ್ಳಿರಿ, ಹೊಟ್ಟೆ ತುಂಬಿಸಿಕೊಳ್ಳಿರಿ,” ಎಂದು ಹೇಳಿದರೆ ಪ್ರಯೋಜನವೇನು? 17ಅದರಂತೆಯೇ, ಕ್ರಿಯೆಗಳಿಲ್ಲದ ನಂಬಿಕೆಯು, ಕ್ರಿಯೆಗಳು ಇಲ್ಲದಿರುವುದರಿಂದ ಸತ್ತ ನಂಬಿಕೆಯಾಗಿರುತ್ತದೆ.

18ಆದರೆ ಒಬ್ಬ ಮನುಷ್ಯನು, “ನಿನ್ನಲ್ಲಿ ನಂಬಿಕೆಯಿದೆ, ನನ್ನಲ್ಲಿ ಕ್ರಿಯೆಗಳಿವೆ,” ಎಂದು ವಾದಿಸಬಹುದು. ಅಂಥವನಿಗೆ, “ನೀನು ಕ್ರಿಯೆಗಳಿಲ್ಲದೆ ನಿನ್ನ ನಂಬಿಕೆಯನ್ನು ನನಗೆ ರುಜುಪಡಿಸು. ನಾನು ನನ್ನ ಕ್ರಿಯೆಗಳ ಮುಖಾಂತರ ನನ್ನ ನಂಬಿಕೆಯನ್ನು ನಿನಗೆ ರುಜುಪಡಿಸುತ್ತೇನೆ,” ಎಂದು ಹೇಳಬಹುದು.

19ದೇವರು ಒಬ್ಬರೇ ಎಂದು ನೀನು ನಂಬುತ್ತೀ, ಅದು ಒಳ್ಳೆಯದು, ದೆವ್ವಗಳು ಕೂಡ ಹಾಗೆಯೇ ನಂಬಿ ನಡುಗುತ್ತವೆ.

20ಮೂರ್ಖನೇ, ಕ್ರಿಯೆಗಳಿಲ್ಲದ ನಂಬಿಕೆಯು ಸತ್ತದ್ದೆಂದು ತಿಳಿದುಕೊಳ್ಳಲು ನಿನಗೆ ಪ್ರಮಾಣಗಳು ಬೇಕೋ? 21ನಮ್ಮ ಪಿತೃವಾದ ಅಬ್ರಹಾಮನು ತನ್ನ ಮಗನಾದ ಇಸಾಕನನ್ನು ಬಲಿಪೀಠದ ಮೇಲೆ ಅರ್ಪಿಸಿದಾಗ ನೀತಿನಿರ್ಣಯವನ್ನು ಹೊಂದಿದ್ದು ಕ್ರಿಯೆಗಳಿಂದಲ್ಲವೇ? 22ಅಬ್ರಹಾಮನ ನಂಬಿಕೆಯೂ ಕ್ರಿಯೆಗಳೂ ಒಂದಾಗಿ ಕಾರ್ಯ ಸಾಧಿಸಿದವು. ಹೀಗೆ ಅವನು ಮಾಡಿದ ಕ್ರಿಯೆಗಳಿಂದಲೇ ಅವನ ನಂಬಿಕೆಯು ಸಂಪೂರ್ಣಗೊಂಡಿತು ಎಂದು ನೋಡುತ್ತೇವೆ. 23ಹೀಗೆ, “ಅಬ್ರಹಾಮನು ದೇವರನ್ನು ನಂಬಿದನು. ಆ ನಂಬಿಕೆಯು ಅವನ ಲೆಕ್ಕಕ್ಕೆ ನೀತಿ ಎಂದು ಎಣಿಸಲಾಯಿತು,” ಎಂಬ ಪವಿತ್ರ ವೇದದ ವಾಕ್ಯವು ನೆರವೇರಿತು. ಅಬ್ರಹಾಮನು ದೇವರ ಸ್ನೇಹಿತನೆಂದು ಎಣಿಸಿಕೊಂಡನು. 24ಹೀಗೆ ಮನುಷ್ಯನು ನಂಬಿಕೆಯಿಂದ ಮಾತ್ರವಲ್ಲ ಕ್ರಿಯೆಗಳಿಂದಲೂ ನೀತಿವಂತನೆಂದು ನಿರ್ಣಯ ಹೊಂದುತ್ತಾನೆ ಎಂದು ನೀವು ನೋಡುತ್ತೀರಿ.

25ಅದೇ ರೀತಿಯಾಗಿ ರಹಾಬಳೆಂಬ ವೇಶ್ಯೆಯು ಸಹ ಗೂಢಚಾರರನ್ನು ಸೇರಿಸಿಕೊಂಡು, ಅವರನ್ನು ಬೇರೆ ದಾರಿಯಿಂದ ಕಳುಹಿಸಿದ ಕ್ರಿಯೆಗಳಿಂದಲೇ ಆಕೆಯು ನೀತಿನಿರ್ಣಯವನ್ನು ಹೊಂದಿದಳಲ್ಲವೇ? 26ಆತ್ಮವಿಲ್ಲದ ದೇಹವು ಸತ್ತದ್ದಾಗಿರುವ ಪ್ರಕಾರವೇ, ಕ್ರಿಯೆಗಳಿಲ್ಲದ ನಂಬಿಕೆಯೂ ಸತ್ತದ್ದಾಗಿರುತ್ತದೆ.

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™ ಕೃತಿಸ್ವಾಮ್ಯ © 1999, 2020, 2022 Biblica, Inc. Biblica® Open Kannada Contemporary Version™ Copyright © 1999, 2020, 2022 by Biblica, Inc.
Biblica® Open Kannada Contemporary Version 2022 · Creative Commons - Attribution-ShareAlike [CC BY-SA]