Skip to content
The Believer's Library

Indian Revised Version (IRV) Kannada - 2019

Ezekiel 2 IRVKan

Side by side with the Father's Heart Bible™

ಯೆಹೆಜ್ಕೇಲನ ಕರೆ

1ಯೆಹೋವನು ನನಗೆ, “ನರಪುತ್ರನೇ, ಎದ್ದು ನಿಂತುಕೋ, ನಿನ್ನ ಸಂಗಡ ಮಾತನಾಡುವೆನು” ಎಂದು ಹೇಳಿದನು. 2ಆತನು ಈ ಮಾತನ್ನು ಹೇಳುವಾಗ ದೇವರಾತ್ಮವು ನನ್ನೊಳಗೆ ಪ್ರವೇಶಿಸಿ, ನಾನು ಎದ್ದು ನಿಂತುಕೊಳ್ಳುವಂತೆ ಮಾಡಿತು; ಆಗ ನನ್ನೊಡನೆ ಮಾತನಾಡಿದಾತನ ನುಡಿಯನ್ನು ಕೇಳಿದೆನು. 3ಆತನು ನನಗೆ ಹೀಗೆ ಹೇಳಿದನು, “ನರಪುತ್ರನೇ, ನನ್ನ ವಿರುದ್ಧವಾಗಿ ತಿರುಗಿಬಿದ್ದು ದ್ರೋಹಮಾಡಿದ ಜನಾಂಗದವರಾದ ಇಸ್ರಾಯೇಲರ ಬಳಿಗೆ ನಿನ್ನನ್ನು ಕಳುಹಿಸುತ್ತೇನೆ; ಈ ದಿನದವರೆಗೆ ಅವರೂ, ಅವರ ಪೂರ್ವಿಕರೂ ನನ್ನ ವಿರುದ್ಧವಾಗಿ ಪಾಪಮಾಡುತ್ತಲೇ ಇದ್ದಾರೆ.

4“ನಾನು ಯಾವ ಸಂತಾನದವರ ಬಳಿಗೆ ನಿನ್ನನ್ನು ಕಳುಹಿಸುತ್ತೇನೋ ಆ ಸಂತಾನದವರು ನಾಚಿಕೆಗೆಟ್ಟವರೂ, ಹಟಗಾರರೂ ಆಗಿರುತ್ತಾರೆ; ನೀನು ಅವರಿಗೆ, ‘ಕರ್ತನಾದ ಯೆಹೋವನು ಇಂತೆನ್ನುತ್ತಾನೆ’ ಎಂದು ನುಡಿ. 5ಅವರು ಕೇಳಲಿ ಅಥವಾ ಕೇಳದೇ ಇರಲಿ ಏಕೆಂದರೆ ಅವರು ತಿರುಗಿ ಬೀಳುವ ವಂಶದವರು. ಆದರೆ ಒಬ್ಬ ಪ್ರವಾದಿಯು ತಮ್ಮ ಮಧ್ಯದಲ್ಲಿ ಇದ್ದಾನೆಂದು ತಿಳಿದುಕೊಳ್ಳುವರು.”

6“ನರಪುತ್ರನೇ, ನೀನು ಮುಳ್ಳುಪೊದೆಗಳಲ್ಲಿ ಸಿಕ್ಕಿಕೊಂಡು, ಚೇಳುಗಳ ನಡುವೆ ವಾಸಿಸುವಂತೆ ಅವರ ಮಧ್ಯದಲ್ಲಿದ್ದರೂ ಅವರಿಗೆ ಭಯಪಡಬೇಡ, ಅವರ ಗದರಿಕೆಗೆ ಹೆದರದಿರು; ಅವರು ತಿರುಗಿ ಬೀಳುವ ವಂಶದವರು; ಅವರ ಬಿರುನುಡಿಗೆ ಭಯಪಡಬೇಡ, ಅವರ ಬಿರುನೋಟಕ್ಕೆ ಹೆದರದಿರು. 7ಅವರು ಕೇಳಿದರೂ, ಕೇಳದೆ ಹೋದರೂ ನೀನು ನನ್ನ ಮಾತುಗಳನ್ನು ಅವರಿಗೆ ಹೇಳಬೇಕು; ಅವರು ಖಂಡಿತವಾಗಿ ದ್ರೋಹಿಗಳೇ.”

ಪ್ರವಾದಿಗೆ ಲಭಿಸಿದ ವರ

8ಇದಲ್ಲದೆ ಆತನು, “ನರಪುತ್ರನೇ, ನಾನು ನಿನಗೆ ಹೇಳುವ ಮಾತನ್ನು ಕೇಳು; ಅವಿಧೇಯರಾದ ಆ ವಂಶದವರಂತೆ ನೀನು ಅವಿಧೇಯನಾಗಬೇಡ; ನಾನು ಕೊಡುವುದನ್ನು ಬಾಯಿದೆರೆದು ತಿಂದುಬಿಡು” ಅಂದನು.

9ಇಗೋ, ನಾನು ನೋಡುತ್ತಿರಲಾಗಿ ಒಂದು ಕೈ ನನ್ನ ಕಡೆಗೆ ಚಾಚಿತ್ತು, ಇಗೋ ಅದರಲ್ಲಿ ಗ್ರಂಥದ ಸುರುಳಿಯು ಕಾಣಿಸಿತು. 10ಆತನು ಆ ಸುರುಳಿಯನ್ನು ನನ್ನೆದುರಿನಲ್ಲಿ ಬಿಚ್ಚಿದನು; ಅದರ ಎರಡು ಪಕ್ಕಗಳಲ್ಲಿಯೂ ಬರೆದಿತ್ತು; ಅದರಲ್ಲಿ ಬರೆದದ್ದು ಪ್ರಲಾಪ, ಗೋಳಾಟ, ಶೋಕ ಇವುಗಳೇ.

KAN-IRV Creative Commons License Indian Revised Version (IRV) - kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Indian Revised Version (IRV) Kannada - 2019 · Creative Commons - Attribution-ShareAlike [CC BY-SA]