Skip to content
The Believer's Library

Indian Revised Version (IRV) Kannada - 2019

Philippians 2 IRVKan

Side by side with the Father's Heart Bible™

ಯೇಸುವಿನ ದೀನತೆಯನ್ನು ಅನುಸರಿಸಬೇಕು

1ಕ್ರಿಸ್ತನಿಂದ ಪ್ರೋತ್ಸಾಹ, ಪ್ರೀತಿಯ ಸಾಂತ್ವನ, ಪವಿತ್ರಾತ್ಮನ ಅನ್ಯೋನ್ಯತೆ, ಕಾರುಣ್ಯದಯಾರಸಗಳು ಉಂಟಾಗುವುದಾದರೆ, 2ನೀವೆಲ್ಲರು ಒಂದೇ ಮನಸ್ಸುವುಳ್ಳವರಾಗಿ, ಒಂದೇ ಪ್ರೀತಿಯುಳ್ಳವರಾಗಿ, ಅನ್ಯೋನ್ಯಭಾವವುಳ್ಳವರಾಗಿ ಹಾಗೂ ಒಂದೇ ಗುರಿಯಿಟ್ಟುಕೊಂಡವರಾಗಿ ನನ್ನ ಸಂತೋಷವನ್ನು ಪರಿಪೂರ್ಣಮಾಡಿರಿ. 3ಸ್ವಾರ್ಥದಿಂದಾಗಲಿ, ಒಣ ಹೆಮ್ಮೆಯಿಂದಾಗಲಿ ಯಾವುದನ್ನೂ ಮಾಡದೆ, ಪ್ರತಿಯೊಬ್ಬನು ದೀನಭಾವದಿಂದ ಮತ್ತೊಬ್ಬರನ್ನು ತನಗಿಂತಲೂ ಶ್ರೇಷ್ಠರೆಂದು ಎಣಿಸಲಿ. 4ನಿಮ್ಮಲ್ಲಿ ಪ್ರತಿಯೊಬ್ಬನು ಸ್ವಹಿತವನ್ನು ಮಾತ್ರ ನೋಡದೆ ಪರಹಿತವನ್ನು ಸಹ ನೋಡಲಿ. 5ಕ್ರಿಸ್ತ ಯೇಸುವಿನಲ್ಲಿದ್ದಂಥ ಮನಸ್ಸು ನಿಮ್ಮಲ್ಲಿಯೂ ಇರಲಿ.

6ಆತನು ದೇವಸ್ವರೂಪನಾಗಿದ್ದರೂ,ದೇವರಿಗೆ ಸರಿಸಮಾನನಾಗಿರುವನೆಂಬ ಅಮೂಲ್ಯಪದವಿಯನ್ನು ಬಿಡಲೊಲ್ಲೆನು ಎಂದೆಣಿಸದೆ,

7ತನ್ನನ್ನು ಬರಿದು ಮಾಡಿಕೊಂಡುದಾಸನ ರೂಪವನ್ನು ಧರಿಸಿಕೊಂಡುಮನುಷ್ಯರಿಗೆ ಸಮನಾದನು.ಮನುಷ್ಯನಾಕಾರದಲ್ಲಿ ಕಾಣಿಸಿಕೊಂಡನು.

8ಆತನು ತನ್ನನ್ನು ತಗ್ಗಿಸಿಕೊಂಡು ಮರಣವನ್ನು ಅಂದರೆಶಿಲುಬೆಯ ಮರಣವನ್ನಾದರೂ ಹೊಂದುವಷ್ಟು ವಿಧೇಯನಾದನು.

9ಈ ಕಾರಣದಿಂದ ದೇವರು ಆತನನ್ನು ಅತ್ಯುನ್ನತ ಸ್ಥಾನಕ್ಕೆ ಏರಿಸಿ,ಎಲ್ಲಾ ಹೆಸರುಗಳಿಗಿಂತ ಶ್ರೇಷ್ಠವಾದ ಹೆಸರನ್ನು ಆತನಿಗೆ ದಯಪಾಲಿಸಿದ್ದಾನೆ.

10ಆದ್ದರಿಂದ ಸ್ವರ್ಗ ಮರ್ತ್ಯ ಪಾತಾಳಗಳಲ್ಲಿರುವವರೆಲ್ಲರೂಯೇಸುವಿನ ಹೆಸರಿನಲ್ಲಿ ಮೊಣಕಾಲೂರಿ ಅಡ್ಡಬಿದ್ದು,

11ತಂದೆಯಾದ ದೇವರ ಮಹಿಮೆಗಾಗಿ ಪ್ರತಿಯೊಂದು ನಾಲಿಗೆಯುಯೇಸು ಕ್ರಿಸ್ತನನ್ನು ಕರ್ತನೆಂದು ಅರಿಕೆಮಾಡುವುದು.

ನಕ್ಷತ್ರಗಳಂತೆ ಪ್ರಕಾಶಿಸುವುದು

12ಹೀಗಿರುವಲ್ಲಿ ನನ್ನ ಪ್ರಿಯರೇ, ನೀವು ನನ್ನ ಮಾತನ್ನು ಯಾವಾಗಲೂ ಅನುಸರಿಸಿದಂತೆ ಈಗಲೂ ಅನುಸರಿಸಿರಿ. ನಾನು ನಿಮ್ಮಲ್ಲಿರುವಾಗ ಮಾತ್ರವಲ್ಲದೆ, ನಾನಿಲ್ಲದಿರುವಾಗಲೂ ಬಹು ಹೆಚ್ಚಾಗಿ ಮನೋಭೀತಿಯಿಂದ ನಡುಗುವವರಾಗಿ ನಿಮ್ಮ ನಿಮ್ಮ ರಕ್ಷಣೆಯನ್ನು ಸಾಧಿಸಿಕೊಳ್ಳಿರಿ. 13ಯಾಕೆಂದರೆ ದೇವರೇ ತನ್ನ ಸುಚಿತ್ತವನ್ನು ನೆರವೇರಿಸಬೇಕೆಂದು ನಿಮ್ಮಲ್ಲಿ ಉದ್ದೇಶವನ್ನೂ ಮತ್ತು ಪ್ರಯತ್ನವನ್ನೂ ಉಂಟುಮಾಡುವವನಾಗಿದ್ದಾನೆ. 14ಗೊಣಗುಟ್ಟದೆಯೂ, ವಿವಾದಗಳಿಲ್ಲದೆಯೂ ಎಲ್ಲವನ್ನು ಮಾಡಿರಿ. 15ಹೀಗೆ ನೀವು ನಿರ್ದೋಷಿಗಳೂ ಹಾಗೂ ಯಥಾರ್ಥಮನಸ್ಸುಳ್ಳವರೂ ಆಗಿದ್ದು ವಕ್ರಬುದ್ಧಿಯುಳ್ಳ ಮೂರ್ಖ ಜಾತಿಯ ಮಧ್ಯದಲ್ಲಿ ದೇವರ ನಿಷ್ಕಳಂಕರಾದ ಮಕ್ಕಳಾಗಿರುವಿರಿ. 16ಇವರೊಳಗೆ ನೀವು ಸರ್ವರಿಗೂ ಜೀವದಾಯಕ ವಾಕ್ಯವನ್ನು ತೋರಿಸಿಕೊಡುವವರಾಗಿದ್ದು, ಲೋಕದೊಳಗೆ ಹೊಳೆಯುವ ನಕ್ಷತ್ರಗಳಂತೆ ಕಾಣಿಸುತ್ತೀರಿ. ನೀವು ಹೀಗೆ ನಡೆದರೆ ನಾನು ಸುವಾರ್ತೆಗಾಗಿ ಓಡಿದ ಓಟವು ವ್ಯರ್ಥವಲ್ಲ, ನಾನು ಪ್ರಯಾಸಪಟ್ಟದ್ದೂ ವ್ಯರ್ಥವಲ್ಲ ಎಂಬ ಹೊಗಳಿಕೆಯು ಕ್ರಿಸ್ತನ ದಿನದಲ್ಲಿ ನನಗೆ ಉಂಟಾಗುವುದು. 17ನಿಮ್ಮ ನಂಬಿಕೆಯೆಂಬ ಯಜ್ಞವನ್ನು ದೇವರಿಗರ್ಪಿಸುವ ಸೇವೆಯಲ್ಲಿ ನಾನೇ ಪಾನದ್ರವ್ಯವಾಗಿ ಅರ್ಪಿತವಾಗಬೇಕಾದರೂ ನನಗೆ ಸಂತೋಷವೇ, ನಿಮ್ಮೆಲ್ಲರೊಂದಿಗೂ ಸಂತೋಷ ಪಡುತ್ತೇನೆ. 18ಹಾಗೆಯೇ ನೀವೂ ಸಂತೋಷಿಸಿರಿ, ನನ್ನೊಂದಿಗೆ ಸಂತೋಷಪಡಿರಿ.

ಎಪಫ್ರೊದೀತನ್ನೂ ತಿಮೊಥೆಯನ್ನೂ

19ಆದರೆ ನಾನು ತಿಮೊಥೆಯನನ್ನು ಬೇಗನೆ ನಿಮ್ಮ ಬಳಿಗೆ ಕಳುಹಿಸಬೇಕೆಂದು ಕರ್ತನಾದ ಯೇಸುವಿನಲ್ಲಿ ನಿರೀಕ್ಷಿಸುತ್ತೇನೆ. ಅವನ ಮುಖಾಂತರ ನಿಮ್ಮ ಸಂಗತಿಗಳನ್ನು ತಿಳಿದು ನಾನೂ ಆದರಣೆ ಹೊಂದಿದೆನು. 20ಅವನ ಹಾಗೆ ನಿಮ್ಮ ಯೋಗಕ್ಷೇಮವನ್ನು ಕುರಿತು ಯಥಾರ್ಥವಾಗಿ ಚಿಂತಿಸುವವರು ನನ್ನ ಬಳಿಯಲ್ಲಿ ಬೇರೆ ಯಾರೂ ಇಲ್ಲ. 21ಎಲ್ಲರೂ ಸ್ವಕಾರ್ಯಗಳ ಮೇಲೆ ಮನಸ್ಸಿಡುತ್ತಾರೆಯೇ ಹೊರತು ಯೇಸು ಕ್ರಿಸ್ತನ ಕಾರ್ಯಗಳ ಮೇಲೆ ಮನಸ್ಸಿಡುವುದಿಲ್ಲ. 22ಆದರೆ ತಿಮೊಥೆಯನ ಯೋಗ್ಯತೆಯನ್ನು ನೀವು ತಿಳಿದುಕೊಂಡಿದ್ದೀರಿ. ಮಗನು ತಂದೆಗೆ ಹೇಗೋ ಹಾಗೆಯೇ ಅವನು ನನ್ನ ಜೊತೆಯಲ್ಲಿ ಸುವಾರ್ತಾಪ್ರಚಾರಕ್ಕಾಗಿ ಸೇವೆಮಾಡಿದನೆಂಬುದು ನಿಮಗೆ ಗೊತ್ತುಂಟು. 23ಆದ್ದರಿಂದ ನನ್ನ ವಿಷಯವು ಹೇಗಾಗುವುದೋ ಅದನ್ನು ತಿಳಿದ ಕೂಡಲೆ ಅವನನ್ನೇ ಕಳುಹಿಸುವುದಕ್ಕೆ ಬಯಸುತ್ತೇನೆ. 24ಇದಲ್ಲದೆ ನಾನು ಸಹ ಬೇಗನೆ ಬರುವೆನೆಂದು ಕರ್ತನಲ್ಲಿ ದೃಢವಾಗಿ ನಂಬಿದ್ದೇನೆ.

25ನನ್ನ ಕೊರತೆಯನ್ನು ನೀಗುವುದಕ್ಕೆ ನೀವು ಕಳುಹಿಸಿದಂಥ, ನನ್ನ ಸಹೋದರನೂ, ಜೊತೆಸೇವಕನೂ, ಸಹಸೇನಾನಿಯೂ ಆಗಿರುವಂಥ ಎಪಫ್ರೊದೀತನನ್ನು ನಿಮ್ಮ ಬಳಿಗೆ ಕಳುಹಿಸುವುದು ಅವಶ್ಯವೆಂದು ಭಾವಿಸಿದ್ದೇನೆ. 26ಅವನು ನಿಮ್ಮೆಲ್ಲರನ್ನು ಕುರಿತು ಹಂಬಲಿಸುತ್ತಿದ್ದನು ಮತ್ತು ತಾನು ಅಸ್ವಸ್ಥನಾಗಿದ್ದ ಸುದ್ದಿಯನ್ನು ನೀವು ಕೇಳಿದ್ದರಿಂದ ಅವನು ನೊಂದುಕೊಂಡನು. 27ಅವನು ರೋಗದಲ್ಲಿ ಬಿದ್ದು ಸಾಯುವ ಹಾಗಿದ್ದನೆಂಬುದು ನಿಜವೇ, ಆದರೆ ದೇವರು ಅವನನ್ನು ಕರುಣಿಸಿದನು. ಅವನನ್ನು ಮಾತ್ರವಲ್ಲದೆ ನನಗೆ ದುಃಖದ ಮೇಲೆ ದುಃಖವು ಬಾರದಂತೆ ನನ್ನನ್ನೂ ಕರುಣಿಸಿದನು. 28ಆದ್ದರಿಂದ ನೀವು ಅವನನ್ನು ನೋಡಿ ತಿರುಗಿ ಸಂತೋಷಪಡಬೇಕೆಂತಲೂ ನನ್ನ ದುಃಖ ಕಡಿಮೆಯಾಗಬೇಕೆಂತಲೂ ನಾನು ಅವನನ್ನು ಅತಿ ತವಕದಿಂದ ಕಳುಹಿಸಿದ್ದೇನೆ. 29ಹೀಗಿರಲಾಗಿ ನೀವೇ ನನಗೆ ಮಾಡಬೇಕೆಂದಿರುವ ಉಪಚಾರದಲ್ಲಿ ಕೊರತೆಯಾದದ್ದನ್ನು ತುಂಬುವುದಕ್ಕಾಗಿ ಅವನು ಜೀವದ ಆಸೆಯನ್ನು ತೊರೆದು ಕ್ರಿಸ್ತನ ಸೇವೆಯ ನಿಮಿತ್ತ ಸಾಯುವ ಸ್ಥಿತಿಯಲ್ಲಿದುದ್ದರಿಂದ ನೀವು ಅವನನ್ನು ಪೂರ್ಣ ಸಂತೋಷದಿಂದ ಕರ್ತನ ಹೆಸರಿನಲ್ಲಿ ಸೇರಿಸಿಕೊಳ್ಳಿರಿ. ಅಂಥವರನ್ನು ಮಾನ್ಯರೆಂದೆಣಿಸಿರಿ.

KAN-IRV Creative Commons License Indian Revised Version (IRV) - kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Indian Revised Version (IRV) Kannada - 2019 · Creative Commons - Attribution-ShareAlike [CC BY-SA]