Skip to content
The Believer's Library

Biblica® Open Kannada Contemporary Version 2022

Job 19 OKCV

Side by side with the Father's Heart Bible™

ಯೋಬನ ಉತ್ತರ

1ಯೋಬನು ಉತ್ತರಕೊಟ್ಟು ಹೇಳಿದ್ದೇನೆಂದರೆ:

2“ಎಷ್ಟರವರೆಗೆ ನನ್ನ ನೋಯಿಸಿ,ನನ್ನನ್ನು ಮಾತುಗಳಿಂದ ಜಜ್ಜುವಿರಿ?

3ಈಗ ಹತ್ತು ಸಾರಿ ನನ್ನನ್ನು ನಿಂದಿಸಿದ್ದೀರಿ;ನಾಚಿಕೆಯಿಲ್ಲದೆ ನೀವು ನನ್ನ ಮೇಲೆ ಆಕ್ರಮಣ ಮಾಡುತ್ತೀರಿ.

4ನಿಜವಾಗಿ ನಾನು ತಪ್ಪು ಮಾಡಿದ್ದರೆ ನಿಮಗೇನು?ನನ್ನ ತಪ್ಪು ನನ್ನ ಸಂಗಡ ಇರಲಿ.

5ನೀವು ನನಗಿಂತ ಉತ್ತಮರು ಎಂದು ಭಾವಿಸುತ್ತಿದ್ದೀರಿ;ನನಗಾದ ಹೀನಸ್ಥಿತಿಯನ್ನು ನನಗೆ ವಿರೋಧವಾಗಿ ಉಪಯೋಗಿಸುತ್ತೀರಿ.

6ದೇವರಿಂದಲೇ ನನಗೆ ಅನ್ಯಾಯವಾಗಿದೆ;ದೇವರು ತಮ್ಮ ಬಲೆಯನ್ನು ನನ್ನ ಮೇಲೆ ಬೀಸಿದ್ದಾರೆಂದು ನಿಮಗೆ ತಿಳಿದಿರಲಿ.

7“ ‘ಹಿಂಸೆ,’ ಎಂದು ನಾನು ಕೂಗಿಕೊಂಡರೂ ನನಗೆ ಉತ್ತರ ಕೊಡುವವರಿಲ್ಲ;ಗಟ್ಟಿಯಾಗಿ ಮೊರೆಯಿಟ್ಟರೂ ನ್ಯಾಯ ದೊರಕುವುದಿಲ್ಲ.

8ನಾನು ಮುಂದೆ ಹೋಗದಂತೆ ದೇವರು ನನ್ನ ದಾರಿಗೆ ಬೇಲಿ ಹಾಕಿದ್ದಾರೆ;ನನ್ನ ಹಾದಿಗಳನ್ನು ಕತ್ತಲು ಕವಿಯುವಂತೆ ಮಾಡಿದ್ದಾರೆ.

9ದೇವರು ನನ್ನ ಘನತೆಯನ್ನು ತೆಗೆದುಹಾಕಿದ್ದಾರೆ;ನನ್ನ ಕಿರೀಟವನ್ನು ನನ್ನ ತಲೆಯಿಂದ ತೆಗೆದುಹಾಕಿದ್ದಾರೆ.

10ನನ್ನ ಸುತ್ತಲೂ ದಾಳಿಯಾಗಿದ್ದರಿಂದ, ನಾನು ಕ್ಷಯಿಸುತ್ತಿದ್ದೇನೆ;ಮರವನ್ನು ಕೀಳುವ ಹಾಗೆ ದೇವರು ನನ್ನ ನಿರೀಕ್ಷೆಯನ್ನು ಕಿತ್ತುಹಾಕಿದ್ದಾರೆ.

11ದೇವರ ಶಿಕ್ಷೆಯು ನನ್ನ ಮೇಲೆ ಉರಿಯುತ್ತಿದೆ;ನಾನು ದೇವರಿಗೆ ವೈರಿಯಂತೆ ಪರಿಗಣಿಸಲಾಗಿದ್ದೇನೆ.

12ದೇವರ ಸೇನೆ ಒಟ್ಟಿಗೆ ಬಂದು,ನನಗೆ ವಿರೋಧವಾಗಿ ದಿಬ್ಬನ್ನು ಕಟ್ಟಿ,ನನ್ನ ಗುಡಾರದ ಸುತ್ತಲೂ ಇಳಿದಿವೆ.

13“ದೇವರು ನನ್ನ ಕುಟುಂಬದವರನ್ನು ನನ್ನಿಂದ ಅಗಲಿಸಿದ್ದಾರೆ;ನನ್ನ ಪರಿಚಿತರೆಲ್ಲರೂ ನನ್ನನ್ನು ತೊರೆದಿದ್ದಾರೆ.

14ನನ್ನ ಬಂಧುಗಳು ನನ್ನನ್ನು ಕೈಬಿಟ್ಟಿದ್ದಾರೆ;ನನ್ನ ಆಪ್ತ ಸ್ನೇಹಿತರು ನನ್ನನ್ನು ಮರೆತುಬಿಟ್ಟಿದ್ದಾರೆ.

15ನನ್ನ ಅತಿಥಿಗಳು, ನನ್ನ ದಾಸದಾಸಿಯರೂ ನನ್ನನ್ನು ಅನ್ಯನೆಂದು ಎಣಿಸುತ್ತಾರೆ;ಅವರ ದೃಷ್ಟಿಯಲ್ಲಿ ನಾನು ಪರದೇಶದವನ ಹಾಗೆ ಇದ್ದೇನೆ.

16ನನ್ನ ಸೇವಕನನ್ನು ಕರೆದರೂ, ಅವನು ನನಗೆ ಉತ್ತರ ಕೊಡುವುದಿಲ್ಲ;ನನ್ನ ಬಾಯಿತೆರೆದು ಅವನನ್ನು ಬೇಡಿಕೊಂಡರೂ ಅವನು ಬರುವುದಿಲ್ಲ.

17ನನ್ನ ಶ್ವಾಸವು ನನ್ನ ಹೆಂಡತಿಗೆ ಅಸಹ್ಯವಾಗಿದೆ,ನನ್ನ ಕುಟುಂಬದವರಿಗೆ ನಾನು ಹೇಸಿಕೆಯಾದೆ.

18ಚಿಕ್ಕವರೂ ಸಹ ನನ್ನನ್ನು ತಿರಸ್ಕರಿಸುತ್ತಾರೆ;ನಾನು ಕಾಣಿಸಿಕೊಂಡಾಗ ನನ್ನನ್ನು ಹಾಸ್ಯಮಾಡುತ್ತಾರೆ.

19ನನ್ನ ಆಪ್ತ ಸ್ನೇಹಿತರೆಲ್ಲಾ ನನ್ನನ್ನು ಕಂಡು ಅಸಹ್ಯಪಡುತ್ತಾರೆ;ನಾನು ಪ್ರೀತಿ ಮಾಡಿದವರೇ ನನಗೆ ವಿರೋಧವಾಗಿ ತಿರುಗಿಬಿದ್ದಿದ್ದಾರೆ.

20ನಾನು ಕೇವಲ ಎಲುಬೂ ತೊಗಲೂ ಆಗಿಬಿಟ್ಟಿದ್ದೇನೆ;ನಾನು ನನ್ನ ಹಲ್ಲು ಚರ್ಮದಿಂದಲೇ ತಪ್ಪಿಸಿಕೊಂಡೆನು.

21“ಕನಿಕರಿಸಿರಿ, ನನ್ನ ಸ್ನೇಹಿತರೇ, ನನ್ನನ್ನು ಕನಿಕರಿಸಿರಿ,ಏಕೆಂದರೆ ದೇವರ ಕೈ ನನ್ನನ್ನು ದಂಡಿಸಿದೆ.

22ದೇವರಂತೆ ನೀವು ನನ್ನನ್ನು ಏಕೆ ಹಿಂಸಿಸುತ್ತೀರಿ?ನನಗೆ ತೊಂದರೆಪಡಿಸಿದ್ದು ಸಾಲದೋ?

23“ಆಹಾ, ನನ್ನ ಮಾತುಗಳು ದಾಖಲಿಸಿದ್ದರೆ,ಆ ಮಾತುಗಳನ್ನು ಸುರುಳಿಗಳಲ್ಲಿ ಬರೆದಿದ್ದರೆ,

24ಕಬ್ಬಿಣದ ಉಳಿಯಿಂದ ಬಂಡೆಯ ಮೇಲೆ ಕೆತ್ತಿ, ಸೀಸೆ ಎರೆದುಅವುಗಳನ್ನು ಶಾಶ್ವತ ಶಾಸನವಾಗಿ ಮಾಡಿದ್ದರೆ ಎಷ್ಟೋ ಒಳಿತು!

25ನನ್ನ ವಿಮೋಚಕರು ಜೀವಿಸುತ್ತಿದ್ದಾರೆ ಎಂದು ತಿಳಿದಿದ್ದೇನೆ.ಕಡೆಯ ದಿನದಲ್ಲಿ ಭೂಮಿಯ ಮೇಲೆ ನನ್ನ ವಿಮೋಚಕರು ಬಂದು ನಿಲ್ಲುವರೆಂದೂ ತಿಳಿದಿದ್ದೇನೆ.

26ನನ್ನ ಚರ್ಮವು ಬಿರಿದು ಹಾಳಾದ ಬಳಿಕವೂ,ನಾನು ದೇಹದಾರಿಯಾಗಿಯೇ ದೇವರನ್ನು ನೋಡುವೆನು.

27ದೇವರನ್ನು ನಾನೇ ನೋಡುವೆನು;ಬೇರೆಯವರಲ್ಲ, ನನ್ನ ಕಣ್ಣಾರೆ ಅವರನ್ನು ಕಾಣುವೆನು;ಅದಕ್ಕಾಗಿ ನನ್ನ ಹೃದಯವು ನನ್ನೊಳಗೆ ಹಂಬಲಿಕೆಯಿಂದ ಹಾರೈಸುತ್ತಿದೆ!

28“ ‘ಸ್ನೇಹಿತರೇ, ಅವನ ದುರ್ಗತಿಗೆ ಕಾರಣ ಅವನಲ್ಲಿಯೇ ಇದೆ,ನಾವು ಅವನಿಗೆ ಹೇಗೆ ತೊಂದರೆಕೊಡೋಣ?’ ಎಂದು ನೀವು ಹೇಳಿದರೆ,

29ನೀವು ಖಡ್ಗಕ್ಕೆ ಭಯಪಡಬೇಕಾಗುತ್ತದೆ;ಏಕೆಂದರೆ, ಕ್ರೋಧವು ದಂಡನೆಯನ್ನು ಖಡ್ಗದಿಂದ ತರುವುದು.ಆಗ ನ್ಯಾಯತೀರ್ಪು ಉಂಟೆಂದು ನಿಮಗೆ ತಿಳಿಯುವುದು.”

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™ ಕೃತಿಸ್ವಾಮ್ಯ © 1999, 2020, 2022 Biblica, Inc. Biblica® Open Kannada Contemporary Version™ Copyright © 1999, 2020, 2022 by Biblica, Inc.
Biblica® Open Kannada Contemporary Version 2022 · Creative Commons - Attribution-ShareAlike [CC BY-SA]