Skip to content
The Believer's Library

Biblica® Open Kannada Contemporary Version 2022

Deuteronomy 23 OKCV

Side by side with the Father's Heart Bible™

ಸಭೆಯಿಂದ ಬಹಿಷ್ಕಾರ ಮಾಡುವುದರ ಕುರಿತು

1ಬೀಜ ಹೊಡಿಸಿಕೊಂಡವರು ಅಥವಾ ಜನನ ಇಂದ್ರಿಯ ಕತ್ತರಿಸಿಕೊಂಡವರು ಯೆಹೋವ ದೇವರ ಸಭೆಗೆ ಸೇರಬಾರದು.

2ಅನೈತಿಕ ಸಂಬಂಧದಿಂದ ಹುಟ್ಟಿದ ಸಂತತಿಯವರು, ಹತ್ತನೆಯ ತಲಾಂತರದವರೆಗೂ ಯೆಹೋವ ದೇವರ ಸಭೆಗೆ ಸೇರಬಾರದು.

3ಅಮ್ಮೋನಿಯರು ಇಲ್ಲವೆ ಮೋವಾಬ್ಯರು ಯೆಹೋವ ದೇವರ ಸಭೆಗೆ ಸೇರಬಾರದು; ಹತ್ತನೆಯ ತಲಾಂತರವರೆಗೆ ಅವರು ಯೆಹೋವ ದೇವರ ಸಭೆಯಲ್ಲಿ ಸೇರಬಾರದು. 4ಏಕೆಂದರೆ ನೀವು ಈಜಿಪ್ಟನ್ನು ಬಿಟ್ಟು ಬರುವಾಗ, ಅವರು ನಿಮಗೆ ರೊಟ್ಟಿಯನ್ನೂ ನೀರನ್ನೂ ಕೊಡುವುದಕ್ಕೆ ಎದುರುಗೊಳ್ಳಲಿಲ್ಲ. ನಿಮ್ಮನ್ನು ಶಪಿಸುವುದಕ್ಕೆ ಮೆಸೊಪೊತಾಮ್ಯದಲ್ಲಿರುವ ಪೆತೋರಿನಿಂದ ಬೆಯೋರನ ಮಗ ಬಿಳಾಮನಿಗೆ ಕೂಲಿ ಕೊಟ್ಟು ನಿಮಗೆ ವಿರೋಧವಾಗಿ ಕರೆಸಿದರು. 5ಆದರೂ ನಿಮ್ಮ ದೇವರಾದ ಯೆಹೋವ ದೇವರು ನಿಮ್ಮನ್ನು ಪ್ರೀತಿಸಿದ್ದರಿಂದ ಬಿಳಾಮನ ಮಾತಿಗೆ ಸಮ್ಮತಿಸಲಿಲ್ಲ. ನಿಮ್ಮ ದೇವರಾದ ಯೆಹೋವ ದೇವರು ಅವನಿಂದ ಶಾಪವನ್ನು ನುಡಿಸದೆ, ಆಶೀರ್ವಾದವನ್ನೇ ಹೇಳಿಸಿದರು. 6ನೀವು ಇರುವವರೆಗೆ ಎಂದಿಗೂ ಅವರ ಏಳಿಗೆಯನ್ನು, ಕ್ಷೇಮವನ್ನು ಬಯಸಬಾರದು.

7ಎದೋಮ್ಯನನ್ನು ಅಸಹ್ಯಿಸಬೇಡಿರಿ, ಏಕೆಂದರೆ ಅವನು ನಿಮ್ಮ ಸಹೋದರನು; ಈಜಿಪ್ಟಿನವನನ್ನು ಅಸಹ್ಯಿಸಬೇಡಿರಿ, ಏಕೆಂದರೆ ಅವನ ದೇಶದಲ್ಲಿ ನೀವು ಪರವಾಸಿಯಾಗಿದ್ದಿರಿ. 8ಅವರಿಗೆ ಹುಟ್ಟುವ ಮಕ್ಕಳಲ್ಲಿ ಮೂರನೆಯ ತಲಾಂತರದವರು ಯೆಹೋವ ದೇವರ ಸಭೆಯಲ್ಲಿ ಸೇರಬಹುದು.

ಯುದ್ಧಕಾಲದಲ್ಲಿ ಪಾಳೆಯವು ನಿರ್ಮಲವಾಗಿ ಇರಬೇಕು

9ನೀವು ಶತ್ರುಗಳಿಗೆ ವಿರೋಧವಾಗಿ ಸೈನ್ಯವಾಗಿ ಹೊರಟರೆ, ಪಾಳೆಯದಲ್ಲಿ ಯಾವ ಅಶುದ್ಧ ಕಾರ್ಯಗಳು ಇಲ್ಲದಂತೆ ನಿಮ್ಮನ್ನು ಕಾಪಾಡಿಕೊಳ್ಳಿರಿ. 10ರಾತ್ರಿಯಲ್ಲಿ ವೀರ್ಯ ವಿಸರ್ಜನೆಯ ದೆಸೆಯಿಂದ ಯಾವನಾದರು ಅಶುದ್ಧನಾದವನು ನಿಮ್ಮಲ್ಲಿದ್ದರೆ, ಅವನು ಪಾಳೆಯದ ಒಳಗೆ ಇರದೆ ಹೊರಗೆ ಇರಬೇಕು. 11ಸಂಜೆ ಆಗುತ್ತಿರುವಾಗ ಅವನು ಸ್ನಾನಮಾಡಿ, ಸೂರ್ಯನು ಮುಳುಗಿದಾಗ ಪಾಳೆಯದ ಒಳಗೆ ತಿರುಗಿಬರಬಹುದು.

12ಇದಲ್ಲದೆ ನೀವು ಮಲವಿಸರ್ಜನೆಗೆ ಹೋಗಲು ಪಾಳೆಯದ ಹೊರಗೆ ಸ್ಥಳವಿರಬೇಕು. 13ನಿಮ್ಮ ಆಯುಧಗಳ ಜೊತೆಯಲ್ಲಿ ಕಬ್ಬಿಣದ ಸಲಕೆ ಇರಬೇಕು. ನೀವು ಮಲವಿಸರ್ಜನೆ ಮಾಡಿದಾಗ, ಆ ಸಲಕೆಯಿಂದ ಅಗೆದು ಮುಚ್ಚಿಬಿಡಬೇಕು. 14ನಿಮ್ಮ ದೇವರಾದ ಯೆಹೋವ ದೇವರು ನಿಮ್ಮನ್ನು ರಕ್ಷಿಸುವುದಕ್ಕೂ, ನಿಮ್ಮ ಶತ್ರುಗಳನ್ನು ನಿಮ್ಮ ಮುಂದೆ ಒಪ್ಪಿಸಿಬಿಡುವುದಕ್ಕೂ ಪಾಳೆಯದ ಮಧ್ಯದಲ್ಲಿ ಸಂಚಾರ ಮಾಡುತ್ತಾರೆ. ಅವರು ನಿಮ್ಮಲ್ಲಿ ಅಶುದ್ಧವಾದ ಕಾರ್ಯವನ್ನು ನೋಡಿ, ನಿಮ್ಮನ್ನು ಬಿಟ್ಟು ತಿರುಗಿಹೋಗದಂತೆ ನಿಮ್ಮ ಪಾಳೆಯವು ನಿರ್ಮಲವಾಗಿರಬೇಕು.

ಇತರ ವಿಷಯಗಳು

15ತನ್ನ ಯಜಮಾನನನ್ನು ಬಿಟ್ಟು, ನಿನ್ನ ಬಳಿಗೆ ತಪ್ಪಿಸಿಕೊಂಡು ಬಂದ ದಾಸನನ್ನು ಹಿಡಿದು ಯಜಮಾನನಿಗೆ ಒಪ್ಪಿಸಬಾರದು. 16ನಿಮ್ಮ ಊರುಗಳಲ್ಲಿ ಯಾವ ಸ್ಥಳವು ಅವನಿಗೆ ಒಳ್ಳೆಯದೆಂದು ತೋಚುತ್ತದೆಯೋ, ಅಲ್ಲಿಯೇ ವಾಸವಾಗಲಿ. ಅವನನ್ನು ನೀವು ಕುಗ್ಗಿಸಬಾರದು.

17ಇಸ್ರಾಯೇಲರಲ್ಲಿ ಯಾವ ಸ್ತ್ರೀಯೂ ಗುಡಿ ವೇಶ್ಯೆಯಾಗಬಾರದು. ಇಸ್ರಾಯೇಲರಲ್ಲಿ ಯಾವ ಪುರುಷನೂ ಅಂಥ ವೇಶ್ಯೆತನಕ್ಕೆ ಇಳಿಯಬಾರದು. 18ಇಸ್ರಾಯೇಲರ ಪುರುಷ ಅಥವಾ ಸ್ತ್ರೀಯು ಸೂಳೆಗಾರಿಕೆಯಿಂದ ಸಂಪಾದಿಸಿದ ಹಣವನ್ನು ಹರಕೆಯಾಗಿ ದೇವ ಮಂದಿರದೊಳಗೆ ತರಬಾರದು. ಏಕೆಂದರೆ ಅವೆರಡನ್ನು ನಿನ್ನ ದೇವರಾದ ಯೆಹೋವ ದೇವರು ದ್ವೇಷಿಸುತ್ತಾರೆ.

19ನಿನ್ನ ಸಹೋದರನಿಗೆ ಹಣವನ್ನಾಗಲಿ, ಊಟವನ್ನಾಗಲಿ, ಬೇರೆ ಯಾವುದನ್ನಾಗಲಿ ಬಡ್ಡಿಗೆ ಕೊಡಬಾರದು. 20ಪರದೇಶದವನಿಗೆ ಬಡ್ಡಿಗೆ ಕೊಡಬಹುದೇ ಹೊರತು ಸಹೋದರನಿಗೆ ಕೊಡಬಾರದು. ಹೀಗೆ ನಡೆದರೆ ನೀವು ಸ್ವದೇಶವಾಗಿ ಪಡೆಯಲಿರುವ ನಾಡಿನಲ್ಲಿ ನಿಮ್ಮ ದೇವರಾದ ಯೆಹೋವ ದೇವರು ನಿಮ್ಮ ಎಲ್ಲಾ ಕೆಲಸಗಳನ್ನು ಆಶೀರ್ವದಿಸುತ್ತಾರೆ.

21ನೀನು ನಿನ್ನ ದೇವರಾದ ಯೆಹೋವ ದೇವರಿಗೆ ಹರಕೆಮಾಡಿದ ಮೇಲೆ ಅದನ್ನು ಸಲ್ಲಿಸುವುದಕ್ಕೆ ತಡಮಾಡಬೇಡ. ಏಕೆಂದರೆ ನಿನ್ನ ದೇವರಾದ ಯೆಹೋವ ದೇವರು ಅದನ್ನು ನಿಶ್ಚಯವಾಗಿಯೂ ನಿನ್ನ ಬಳಿಯಲ್ಲಿ ವಿಚಾರಿಸುವರು. ತೀರಿಸದೆ ಹೋಗುವದು ಪಾಪ. 22ಆದರೆ ನೀನು ಹರಕೆ ಮಾಡದಿದ್ದರೆ, ನೀನು ದೋಷಿಯಾಗುವುದಿಲ್ಲ. 23ನಿನ್ನ ತುಟಿಗಳಿಂದ ಹೊರಟಿದ್ದನ್ನು ಮಾಡುವುದಕ್ಕೆ ತಪ್ಪಬೇಡ. ನಿನ್ನ ದೇವರಾದ ಯೆಹೋವ ದೇವರಿಗೆ ನಿನ್ನ ಬಾಯಿಯಿಂದಲೇ ನೀನು ಹರಕೆ ಮಾಡಿದಿಯಲ್ಲವೇ.

24ನಿನ್ನ ನೆರೆಯವನ ದ್ರಾಕ್ಷಿ ತೋಟಕ್ಕೆ ಬಂದರೆ, ನಿನ್ನ ಮನಸ್ಸು ತೃಪ್ತಿಯಾಗುವವರೆಗೆ ಹಣ್ಣುಗಳನ್ನು ತಿನ್ನಬಹುದು. ಆದರೆ ನಿನ್ನ ಚೀಲದಲ್ಲಿ ಹಾಕಿಕೊಳ್ಳಬಾರದು. 25ನಿನ್ನ ನೆರೆಯವನ ಪೈರಿನ ಬಳಿಗೆ ಹಾದುಹೋಗುವಾಗ, ಕೈಯಿಂದ ತೆನೆಗಳನ್ನು ಕೀಳಬಹುದು. ಆದರೆ ನಿನ್ನ ನೆರೆಯವನ ಪೈರಿನಲ್ಲಿ ಕುಡುಗೋಲು ಹಾಕಿ ಕೊಯ್ಯಬಾರದು.

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™ ಕೃತಿಸ್ವಾಮ್ಯ © 1999, 2020, 2022 Biblica, Inc. Biblica® Open Kannada Contemporary Version™ Copyright © 1999, 2020, 2022 by Biblica, Inc.
Biblica® Open Kannada Contemporary Version 2022 · Creative Commons - Attribution-ShareAlike [CC BY-SA]