Skip to content
The Believer's Library

Biblica® Open Kannada Contemporary Version 2022

1 Peter 5 OKCV

Side by side with the Father's Heart Bible™

ಸಭೆಯ ಹಿರಿಯರಿಗೂ ಸಭೆಯವರಿಗೂ

1ಜೊತೆ ಹಿರಿಯನೂ ಕ್ರಿಸ್ತ ಯೇಸುವಿನ ಶ್ರಮೆಗಳ ಸಾಕ್ಷಿಯೂ ಪ್ರತ್ಯಕ್ಷವಾಗಲಿರುವ ಮಹಿಮೆಯಲ್ಲಿ ಪಾಲುಗಾರನೂ ಆಗಿರುವ ನಾನು ನಿಮ್ಮಲ್ಲಿರುವ ಹಿರಿಯರನ್ನು ಬೇಡಿಕೊಳ್ಳುವುದು. 2ನಿಮ್ಮಲ್ಲಿರುವ ದೇವರ ಮಂದೆಯನ್ನು ಕಾಯಿರಿ. ಬಲಾತ್ಕಾರದಿಂದಲ್ಲ, ಆದರೆ ದೇವರ ಪ್ರಕಾರ ಇಷ್ಟಪೂರ್ವಕವಾಗಿಯೂ ನೀಚ ದ್ರವ್ಯಾಶೆಯಿಂದಲ್ಲ, ಸಿದ್ಧಮನಸ್ಸಿನಿಂದಲೂ ಮೇಲ್ವಿಚಾರಣೆ ಮಾಡಿರಿ. 3ದೇವರ ಸ್ವಾಸ್ತ್ಯದ ಮೇಲೆ ದೊರೆತನ ಮಾಡುವವರಂತೆ ನಡೆಯದೆ ಮಂದೆಗೆ ಆದರ್ಶವಾಗಿಯೇ ನಡೆದುಕೊಳ್ಳಿರಿ. 4ಪ್ರಧಾನ ಕುರುಬ ಆಗಿರುವವರು ಪ್ರತ್ಯಕ್ಷರಾಗುವಾಗ ನೀವು ಎಂದಿಗೂ ಬಾಡದ ಮಹಿಮೆಯುಳ್ಳ ಕಿರೀಟವನ್ನು ಹೊಂದುವಿರಿ.

5ಅದೇ ರೀತಿಯಾಗಿ ಯೌವನಸ್ಥರೇ, ಹಿರಿಯರಿಗೆ ಅಧೀನರಾಗಿರಿ. ನೀವೆಲ್ಲರೂ ದೀನತೆಯೆಂಬ ವಸ್ತ್ರವನ್ನು ಧರಿಸಿಕೊಂಡು ಒಬ್ಬರಿಗೊಬ್ಬರು ಅಧೀನರಾಗಿರಿ. ಏಕೆಂದರೆ,“ದೇವರು ಅಹಂಕಾರಿಗಳನ್ನು ಎದುರಿಸುತ್ತಾರೆ,ದೀನರಿಗಾದರೋ ಕೃಪೆಯನ್ನು ಕೊಡುತ್ತಾರೆ!”

6ಹೀಗಿರುವುದರಿಂದ ದೇವರ ಪರಾಕ್ರಮವುಳ್ಳ ಹಸ್ತದ ಕೆಳಗೆ ನಿಮ್ಮನ್ನು ತಗ್ಗಿಸಿಕೊಳ್ಳಿರಿ, ಆಗ ದೇವರು ಸಕಾಲದಲ್ಲಿ ನಿಮ್ಮನ್ನು ಮೇಲಕ್ಕೆತ್ತುವರು. 7ನಿಮ್ಮ ಚಿಂತೆಯನ್ನೆಲ್ಲಾ ದೇವರ ಮೇಲೆ ಹಾಕಿರಿ. ಅವರು ನಿಮಗೋಸ್ಕರ ಚಿಂತಿಸುತ್ತಾರೆ.

8ಸ್ವಸ್ಥಚಿತ್ತರಾಗಿರಿ, ಎಚ್ಚರವಾಗಿರಿ. ನಿಮ್ಮ ವಿರೋಧಿಯಾಗಿರುವ ಸೈತಾನನು ಗರ್ಜಿಸುವ ಸಿಂಹದಂತೆ ಯಾರನ್ನು ನುಂಗಲಿ ಎಂದು ಹುಡುಕುತ್ತಾ ತಿರುಗುತ್ತಾನೆ. 9ನೀವು ನಂಬಿಕೆಯಲ್ಲಿ ದೃಢವಾಗಿದ್ದು ಸೈತಾನನನ್ನು ಎದುರಿಸಿರಿ. ಲೋಕದಲ್ಲಿರುವ ನಿಮ್ಮ ಸಹೋದರರಿಗೂ ಸಹೋದರಿಯರಿಗೂ ಅಂಥಾ ಬಾಧೆಗಳೇ ಸಂಭವಿಸುತ್ತವೆ ಎಂದು ನಿಮಗೆ ತಿಳಿದದೆಯಲ್ಲಾ.

10ಕ್ರಿಸ್ತ ಯೇಸುವಿನ ಮೂಲಕ ನಿಮ್ಮನ್ನು ತಮ್ಮ ನಿತ್ಯ ಪ್ರಭಾವಕ್ಕೆ ಕರೆದ ಕೃಪಾಪೂರ್ಣ ಆಗಿರುವ ದೇವರು ನೀವು ಸ್ವಲ್ಪಕಾಲ ಬಾಧೆಪಟ್ಟ ಮೇಲೆ ತಾವೇ ನಿಮ್ಮನ್ನು ಪರಿಪೂರ್ಣಮಾಡಿ, ಸ್ಥಿರಪಡಿಸಿ, ಬಲಪಡಿಸಿ ನೆಲೆಗೊಳಿಸುವರು. 11ಅವರಿಗೆ ಸರ್ವಾಧಿಪತ್ಯವೂ ಯುಗಯುಗಾಂತರಗಳಲ್ಲಿ ಇರಲಿ. ಆಮೆನ್.

ಕಡೆಯ ಮಾತುಗಳು

12ನಿಮ್ಮನ್ನು ಪ್ರೋತ್ಸಾಹಿಸುವುದಕ್ಕೂ ಇದೇ ದೇವರ ನಿಜವಾದ ಕೃಪೆ ಎಂದು ಸಾಕ್ಷಿ ಹೇಳುವುದಕ್ಕೂ ನಿಮಗೆ ನಂಬಿಗಸ್ತ ಆಗಿರುವ ಸಹೋದರನೆಂದು ನಾನು ಎಣಿಸುವ ಸಿಲ್ವಾನನ ಸಹಾಯದಿಂದ ಸಂಕ್ಷೇಪವಾಗಿ ಇದನ್ನು ಬರೆದಿದ್ದೇನೆ. ನಿಜವಾದ ಕೃಪೆಯಲ್ಲಿ ನೀವು ನಿಂತವರಾಗಿದ್ದೀರಿ.

13ನಿಮ್ಮೊಂದಿಗೆ ಆರಿಸಿಕೊಂಡಂಥ ಬಾಬಿಲೋನಿನಲ್ಲಿರುವ ಸಭೆಯು ನಿಮಗೆ ವಂದನೆ ಹೇಳುತ್ತದೆ. ನನ್ನ ಮಗನಾದ ಮಾರ್ಕನು ಸಹ ವಂದನೆ ಹೇಳುತ್ತಾನೆ.

14ಪ್ರೀತಿಯಿಂದ ಮುದ್ದಿಟ್ಟು ಒಬ್ಬರನ್ನೊಬ್ಬರು ವಂದಿಸಿರಿ. ಕ್ರಿಸ್ತ ಯೇಸುವಿನಲ್ಲಿರುವ ನಿಮ್ಮೆಲ್ಲರಿಗೆ ಶಾಂತಿಯಿರಲಿ!

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™ ಕೃತಿಸ್ವಾಮ್ಯ © 1999, 2020, 2022 Biblica, Inc. Biblica® Open Kannada Contemporary Version™ Copyright © 1999, 2020, 2022 by Biblica, Inc.
Biblica® Open Kannada Contemporary Version 2022 · Creative Commons - Attribution-ShareAlike [CC BY-SA]