Skip to content
The Believer's Library

Biblica® Open Kannada Contemporary Version 2022

1 Chronicles 15 OKCV

Side by side with the Father's Heart Bible™

ಮಂಜೂಷವನ್ನು ಯೆರೂಸಲೇಮಿಗೆ ತಂದದ್ದು

1ದಾವೀದನ ಪಟ್ಟಣಗಳಲ್ಲಿ ದಾವೀದನು ತನಗೆ ಮನೆಗಳನ್ನು ಕಟ್ಟಿಸಿಕೊಂಡು, ದೇವರ ಮಂಜೂಷಕ್ಕೋಸ್ಕರ ಸ್ಥಳಗಳನ್ನು ಸಿದ್ಧಮಾಡಿ, ಅದರ ನಿಮಿತ್ತ ಗುಡಾರ ಹಾಕಿದನು. 2ಆಗ ದಾವೀದನು, “ಲೇವಿಯರ ಹೊರತಾಗಿ ಮತ್ತ್ಯಾರೂ ದೇವರ ಮಂಜೂಷವನ್ನು ಹೊರಬಾರದು. ಯೆಹೋವ ದೇವರು ದೇವರ ಮಂಜೂಷವನ್ನು ಹೊರಲೂ, ಯುಗಯುಗಕ್ಕೆ ಅವರಿಗೆ ಸೇವೆಮಾಡಲೂ ಅವರನ್ನು ಆಯ್ದುಕೊಂಡಿದ್ದಾರೆ,” ಎಂದನು.

3ದಾವೀದನು ಯೆಹೋವ ದೇವರ ಮಂಜೂಷವನ್ನು ತಾನು ಅದಕ್ಕೋಸ್ಕರ ಸಿದ್ಧಮಾಡಿದ ಅದರ ಸ್ಥಳಕ್ಕೆ ತೆಗೆದುಕೊಂಡು ಬರುವ ನಿಮಿತ್ತ, ಯೆರೂಸಲೇಮಿಗೆ ಸಮಸ್ತ ಇಸ್ರಾಯೇಲರನ್ನು ಕೂಡಿಸಿ ಬರಮಾಡಿದನು.

4ದಾವೀದನು ಆರೋನನ ಮಕ್ಕಳನ್ನೂ, ಲೇವಿಯರನ್ನೂ ಬರಮಾಡಿದನು.

5ಕೊಹಾತನ ಪುತ್ರರಲ್ಲಿ ಮುಖ್ಯಸ್ಥನಾದ ಉರೀಯೇಲನೂ, ಅವನ ಸಹೋದರರಾದ 120 ಮಂದಿಯೂ;

6ಮೆರಾರೀಯ ಪುತ್ರರಲ್ಲಿ ಮುಖ್ಯಸ್ಥನಾದ ಅಸಾಯನೂ, ಅವನ ಸಹೋದರರಾದ 220 ಮಂದಿಯೂ;

7ಗೇರ್ಷೋಮನ ಪುತ್ರರಲ್ಲಿ ಮುಖ್ಯಸ್ಥನಾದ ಯೋಯೇಲನೂ ಅವನ ಸಹೋದರರಾದ 130 ಮಂದಿಯೂ;

8ಎಲೀಚಾಫಾನನ ಪುತ್ರರಲ್ಲಿ ಮುಖ್ಯಸ್ಥನಾದ ಶೆಮಾಯನೂ, ಅವನ ಸಹೋದರರಾದ 200 ಮಂದಿಯೂ;

9ಹೆಬ್ರೋನನ ಪುತ್ರರಲ್ಲಿ ಮುಖ್ಯಸ್ಥನಾದ ಎಲೀಯೇಲನೂ, ಅವನ ಸಹೋದರರಾದ 80 ಮಂದಿಯೂ;

10ಉಜ್ಜೀಯೇಲನ ಪುತ್ರರಲ್ಲಿ ಮುಖ್ಯಸ್ಥನಾದ ಅಮ್ಮೀನಾದಾಬನೂ, ಅವನ ಸಹೋದರರಾದ 112 ಮಂದಿಯು.

11ಆಗ ದಾವೀದನು ಚಾದೋಕನು, ಅಬಿಯಾತರನು ಎಂಬ ಯಾಜಕರನ್ನೂ; ಉರೀಯೇಲನು, ಅಸಾಯನು, ಯೋಯೇಲನು, ಶೆಮಾಯನು, ಎಲೀಯೇಲನು, ಅಮ್ಮೀನಾದಾಬನು ಎಂಬ ಲೇವಿಯರನ್ನೂ ಕರೆಕಳುಹಿಸಿ ಅವರಿಗೆ, 12“ನೀವು ಲೇವಿಯರ ಕುಟುಂಬಗಳಲ್ಲಿ ಮುಖ್ಯಸ್ಥರಾದ್ದರಿಂದ, ಇಸ್ರಾಯೇಲಿನ ದೇವರಾದ ಯೆಹೋವ ದೇವರ ಮಂಜೂಷವನ್ನು ನಾನು ಅದಕ್ಕೋಸ್ಕರ ಸಿದ್ಧಮಾಡಿದ ಸ್ಥಳಕ್ಕೆ ನೀವು ತರುವ ಹಾಗೆ ನಿಮ್ಮನ್ನೂ, ನಿಮ್ಮ ಸಹೋದರರನ್ನೂ ಪರಿಶುದ್ಧ ಮಾಡಿಕೊಳ್ಳಿರಿ. 13ಏಕೆಂದರೆ ನೀವು ಮೊದಲು ಹಾಗೆ ಮಾಡದೆ ಇದ್ದುದರಿಂದ, ಕೋಪದಿಂದ ಯೆಹೋವ ದೇವರಾದ ನಮ್ಮ ದೇವರು ನಮ್ಮಲ್ಲಿ ಒಂದು ಒಡಕು ಬರುವಂತೆ ಮಾಡಿದರು. ಏಕೆಂದರೆ ನ್ಯಾಯದ ಪ್ರಕಾರ ನಾವು ಅವರನ್ನು ಹುಡುಕಲಿಲ್ಲ,” ಎಂದು ಹೇಳಿದನು. 14ಇಸ್ರಾಯೇಲಿನ ದೇವರಾದ ಯೆಹೋವ ದೇವರ ಮಂಜೂಷವನ್ನು ತರುವುದಕ್ಕೆ ಯಾಜಕರೂ, ಲೇವಿಯರೂ ತಮ್ಮನ್ನು ಪರಿಶುದ್ಧ ಮಾಡಿಕೊಂಡರು. 15ಮೋಶೆಯು ಆಜ್ಞಾಪಿಸಿದ ಯೆಹೋವ ದೇವರ ವಾಕ್ಯದ ಪ್ರಕಾರ ಲೇವಿಯರು ಕೋಲುಗಳನ್ನು ಹಾಕಿ, ದೇವರ ಮಂಜೂಷವನ್ನು ತಮ್ಮ ಹೆಗಲುಗಳ ಮೇಲೆ ಹೊತ್ತುಕೊಂಡು ಹೋದರು.

16ಇದಲ್ಲದೆ ದಾವೀದನು ವಾದ್ಯಗಳನ್ನೂ ವಿಶೇಷವಾದ ವೀಣೆಗಳನ್ನೂ, ಕಿನ್ನರಿಗಳನ್ನೂ, ತಾಳಗಳನ್ನೂ ಬಾರಿಸಿ ಸಂತೋಷದಿಂದ ಸ್ವರವನ್ನೂ ಎತ್ತುವ ಹಾಗೆ, ತಮ್ಮ ಸಹೋದರರಲ್ಲಿ ಹಾಡುಗಾರರನ್ನು ನೇಮಿಸುವುದಕ್ಕೆ ಲೇವಿಯರ ಪ್ರಧಾನರಿಗೆ ಆಜ್ಞಾಪಿಸಿದನು.

17ಹಾಗೆಯೇ ಲೇವಿಯರು ಯೋಯೇಲನ ಮಗನಾದ ಹೇಮಾನನನ್ನೂ, ಅವನ ಸಹೋದರರಲ್ಲಿ ಬೆರೆಕ್ಯನ ಮಗನಾದ ಆಸಾಫನನ್ನೂ, ಮೆರಾರೀಯ ಪುತ್ರರ ಸಂಬಂಧಿಕರಲ್ಲಿ ಕೂಷಾಯನ ಮಗ ಏತಾನನನ್ನೂ ನೇಮಿಸಿದರು. 18ಅವರ ಸಂಗಡ ಎರಡನೆಯ ದರ್ಜೆಯವರಾದ ತಮ್ಮ ಸಹೋದರರಾಗಿರುವ ಜೆಕರ್ಯನನ್ನೂ ಬೇನನನ್ನೂ ಯಾಜೀಯೇಲನನ್ನೂ, ಶೆಮೀರಾಮೋತನನ್ನೂ ಯೆಹೀಯೇಲನನ್ನೂ, ಉನ್ನೀಯನ್ನೂ, ಎಲೀಯಾಬನನ್ನೂ, ಬೆನಾಯನನ್ನೂ, ಮಾಸೇಯನನ್ನೂ, ಮತ್ತಿತ್ಯನನ್ನೂ, ಎಲೀಫೆಲೇಹುನನ್ನೂ ಮಿಕ್ನೇಯನನ್ನೂ ದ್ವಾರಪಾಲಕರಾದ ಓಬೇದ್ ಏದೋಮನನ್ನೂ ಯೆಹೀಯೇಲನನ್ನೂ ನೇಮಿಸಿದರು.

19ಸಂಗೀತಗಾರರಾದ ಹೇಮಾನನೂ, ಆಸಾಫನೂ, ಏತಾನನೂ ಕಂಚಿನ ತಾಳಗಳನ್ನು ಬಾರಿಸುವವರು. 20ಜೆಕರ್ಯ, ಅಜಿಯೇಲ್, ಶೆಮೀರಾಮೋತ್, ಯೆಹೀಯೇಲ್, ಉನ್ನೀ, ಎಲೀಯಾಬ್, ಮಾಸೇಯ, ಬೆನಾಯ ಎಂಬವರನ್ನು ಅಲಮೋತ್ ಎಂಬ ತಾರಸ್ಥಾಯಿಯ ವೀಣೆಗಳನ್ನು ಬಾರಿಸುವುದಕ್ಕೆ ಆರಿಸಿಕೊಂಡರು. 21ಮತ್ತಿತ್ಯ, ಎಲೀಫೆಲೇಹು, ಮಿಕ್ನೇಯ, ಓಬೇದ್ ಏದೋಮ್, ಯೆಹೀಯೇಲ್, ಅಜಜ್ಯ ಎಂಬವರನ್ನು ಶೆಮಿನಿಥ್ ಎಂಬ ಮಂದ್ರಸ್ಥಾಯಿಯ ಕಿನ್ನರಿಗಳನ್ನು ಬಾರಿಸುವುದಕ್ಕೂ ನೇಮಿಸಿಕೊಂಡರು. 22ಆದರೆ ಲೇವಿಯರ ಪ್ರಧಾನನಾದ ಕೆನನ್ಯನು ಹಾಡುವುದಕ್ಕೆ ನೇಮಕವಾದನು. ಅವನು ಸಂಗೀತದಲ್ಲಿ ನಿಪುಣನಾದ್ದರಿಂದ ಅವನು ಮುಖ್ಯಸ್ಥನಾಗಿದ್ದನು.

23ಬೆರೆಕ್ಯ, ಎಲ್ಕಾನಾ ಮಂಜೂಷಕ್ಕೆ ದ್ವಾರಪಾಲಕರಾಗಿದ್ದರು. 24ಯಾಜಕರಾದ ಶೆಬನ್ಯ, ಯೋಷಾಫಾಟ್, ನೆತನೆಯೇಲ್, ಅಮಾಸೈಯೂ, ಜೆಕರ್ಯನೂ, ಬೆನಾಯನೂ, ಎಲೀಯೆಜೆರನೂ ದೇವರ ಮಂಜೂಷದ ಮುಂದೆ ತುತೂರಿಗಳನ್ನು ಊದುತ್ತಾ ಇದ್ದರು. ಓಬೇದ್ ಏದೋಮನೂ, ಯೆಹೀಯನೂ ಮಂಜೂಷಕ್ಕೆ ದ್ವಾರಪಾಲಕರಾಗಿದ್ದರು.

25ಹೀಗೆಯೇ ದಾವೀದನೂ, ಇಸ್ರಾಯೇಲಿನ ಹಿರಿಯರೂ, ಸಹಸ್ರಾಧಿಪತಿಗಳೂ ಸಂತೋಷವಾಗಿ ಓಬೇದ್ ಏದೋಮನ ಮನೆಯೊಳಗಿಂದ ಯೆಹೋವ ದೇವರ ಒಡಂಬಡಿಕೆಯ ಮಂಜೂಷವನ್ನು ತರಲು ಹೋದರು. 26ಯೆಹೋವ ದೇವರ ಒಡಂಬಡಿಕೆಯ ಮಂಜೂಷವನ್ನು ಹೊತ್ತುಕೊಂಡು ಬರುತ್ತಿದ್ದ ಲೇವಿಯರಿಗೆ ದೇವರು ಸಹಾಯ ಮಾಡಿದ್ದರಿಂದ, ಅವರು ಏಳು ಹೋರಿಗಳನ್ನೂ, ಏಳು ಟಗರುಗಳನ್ನೂ ಬಲಿಯಾಗಿ ಅರ್ಪಿಸಿದರು. 27ದಾವೀದನೂ, ಮಂಜೂಷವನ್ನು ಹೊರುವ ಲೇವಿಯರೂ, ಹಾಡುಗಾರರೂ, ಸಂಗೀತಗಾರರ ನಾಯಕನಾದ ಕೆನನ್ಯನೂ ನಯವಾದ ನಾರಿನ ಮೇಲಂಗಿಯನ್ನು ಧರಿಸಿಕೊಂಡಿದ್ದರು. ಇದಲ್ಲದೆ ದಾವೀದನು ನಾರಿನ ಏಫೋದನ್ನು ಧರಿಸಿಕೊಂಡಿದ್ದನು. 28ಹೀಗೆ ಇಸ್ರಾಯೇಲರೆಲ್ಲರೂ ಯೆಹೋವ ದೇವರ ಒಡಂಬಡಿಕೆಯ ಮಂಜೂಷವನ್ನು ಆರ್ಭಟದಿಂದಲೂ, ಕೊಂಬಿನ ಶಬ್ದದಿಂದಲೂ, ತುತೂರಿಗಳಿಂದಲೂ, ತಾಳಗಳಿಂದಲೂ ವೀಣೆಗಳನ್ನೂ, ಕಿನ್ನರಿಗಳನ್ನೂ ಬಾರಿಸುತ್ತಾ ತೆಗೆದುಕೊಂಡು ಬಂದರು.

29ಯೆಹೋವ ದೇವರ ಒಡಂಬಡಿಕೆಯ ಮಂಜೂಷವು ದಾವೀದನ ಪಟ್ಟಣದಲ್ಲಿ ಪ್ರವೇಶಿಸುವಾಗ, ಸೌಲನ ಮಗಳಾದ ಮೀಕಲಳು ಕಿಟಕಿಯಿಂದ ನೋಡಿ, ಕುಣಿಯುತ್ತಾ, ಹಾಡುತ್ತಾ ಇರುವ ಅರಸನಾದ ದಾವೀದನನ್ನು ಕಂಡು, ತನ್ನ ಹೃದಯದಲ್ಲಿ ಅವನನ್ನು ತಿರಸ್ಕರಿಸಿದಳು.

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™ ಕೃತಿಸ್ವಾಮ್ಯ © 1999, 2020, 2022 Biblica, Inc. Biblica® Open Kannada Contemporary Version™ Copyright © 1999, 2020, 2022 by Biblica, Inc.
Biblica® Open Kannada Contemporary Version 2022 · Creative Commons - Attribution-ShareAlike [CC BY-SA]