Skip to content
The Believer's Library

Indian Revised Version (IRV) Kannada - 2019

Zechariah 11 IRVKan

Side by side with the Father's Heart Bible™

ಬಲಿಷ್ಠರ ಪತನ

1ಲೆಬನೋನೇ, ನಿನ್ನ ಬಾಗಿಲುಗಳನ್ನು ತೆರೆ, ಬೆಂಕಿಯು ನಿನ್ನ ದೇವದಾರುಗಳನ್ನು ನುಂಗಲಿ!

2ತುರಾಯಿ ಮರವೇ, ಗೋಳಾಡು! ದೇವದಾರು ಬಿದ್ದಿದೆ, ಶ್ರೇಷ್ಠವೃಕ್ಷಗಳು ನಾಶವಾಗಿವೆ.ಬಾಷಾನಿನ ಅಲ್ಲೋನ್ ಮರಗಳೇ ಕಿರಿಚಿರಿ! ನುಗ್ಗಲಾಗದ ದಟ್ಟವಾದ ವನವು ಉರುಳಿದೆ.

3ಆಹಾ, ಕುರುಬರು ಗೋಳಾಡುತ್ತಾರೆ! ಅವರ ಅತಿಶಯದ ಕಾವಲು ಹಾಳಾಗಿದೆ.ಇಗೋ, ಪ್ರಾಯದ ಸಿಂಹಗಳು ಗರ್ಜಿಸುತ್ತವೆ! ಯೊರ್ದನಿನ ದಟ್ಟ ಅಡವಿಯು ಹಾಳಾಗಿದೆ.

ಒಳ್ಳೆಯ ಕುರುಬನಿಗಾಗುವ ತಿರಸ್ಕಾರ

4ನನ್ನ ದೇವರಾದ ಯೆಹೋವನು ಹೀಗೆ ಅಪ್ಪಣೆಕೊಟ್ಟನು, “ಕೊಯ್ಗುರಿಗಳ ಮಂದೆಯನ್ನು ಕಾಯಿ; 5ಕೊಂಡುಕೊಳ್ಳುವವರು ಅವುಗಳನ್ನು ಕೊಯ್ದರೂ ದೋಷಿಗಳೆಂದು ಎಣಿಸುವುದಿಲ್ಲ; ಮಾರುವವರು ಯೆಹೋವನಿಗೆ ಸ್ತೋತ್ರವಾಗಲಿ, ಧನವಂತರಾದೆವು ಅಂದುಕೊಳ್ಳುವರು. ಆ ಮಂದೆಯ ಕುರುಬರಾದರೂ ಅವುಗಳನ್ನು ಕರುಣಿಸುವುದಿಲ್ಲ.” 6ಯೆಹೋವನು ಇಂತೆನ್ನುತ್ತಾನೆ, “ನಾನು ಲೋಕನಿವಾಸಿಗಳನ್ನು ಇನ್ನು ಕರುಣಿಸೆನು; ಇಗೋ, ಪ್ರತಿಯೊಬ್ಬನನ್ನು ಅವನವನ ನೆರೆಯವನ ಕೈಗೂ, ಅರಸನ ಕೈಗೂ ಒಪ್ಪಿಸುವೆನು; ಆ ಬಲಿಷ್ಠರು ಲೋಕವನ್ನು ಪುಡಿಪುಡಿಮಾಡುವರು; ಅವರ ಕೈಗೆ ಸಿಕ್ಕಿದವರನ್ನು ಉದ್ಧರಿಸೆನು.”

7ಆಗ ನಾನು ದೀನಾವಸ್ಥೆಯಲ್ಲಿದ್ದ ಆ ಕೊಯ್ಗುರಿಗಳ ಮಂದೆಯನ್ನು ಮೇಯಿಸಿದೆನು. ಎರಡು ಕೋಲುಗಳನ್ನು ತೆಗೆದುಕೊಂಡು ಒಂದಕ್ಕೆ “ಕೃಪೆ” ಎಂತಲೂ ಇನ್ನೊಂದಕ್ಕೆ, “ಒಗ್ಗಟ್ಟು” ಎಂತಲೂ ಹೆಸರಿಟ್ಟು ಅವುಗಳಿಂದ ಮಂದೆಯನ್ನು ಮೇಯಿಸಿದೆನು. 8ಒಂದೇ ತಿಂಗಳೊಳಗೆ ಮೂವರು ಕುರುಬರನ್ನು ಅಡಗಿಸಿಬಿಟ್ಟೆನು; ಅನಂತರ ನನಗೆ ಕುರಿಗಳ ವಿಷಯವಾಗಿ ತಾಳ್ಮೆ ತಪ್ಪಿತು; ಅವುಗಳಿಂದ ನನಗೆ ಬೇಸರವಾಯಿತು. 9ಆಗ, “ನಾನು ನಿಮ್ಮನ್ನು ಮೇಯಿಸೆನು; ಸಾಯುವುದು ಸಾಯಲಿ, ಹಾಳಾಗುವುದು ಹಾಳಾಗಲಿ, ಉಳಿದವುಗಳು ಒಂದರ ಮಾಂಸವೊಂದನ್ನು ತಿನ್ನಲಿ ಅಂದುಕೊಂಡೆನು.”

10ಆಗ ನಾನು ಎಲ್ಲಾ ಜನಾಂಗಗಳೊಂದಿಗೆ ಮಾಡಿಕೊಂಡಿದ್ದ ಒಡಂಬಡಿಕೆಯನ್ನು ಭಂಗಪಡಿಸಬೇಕೆಂದು “ಕೃಪೆ” ಎಂಬ ನನ್ನ ಕೋಲನ್ನು ತೆಗೆದು ಕತ್ತರಿಸಿಬಿಟ್ಟೆನು. ಆಗಲೇ ಮುರಿದುಹೋಯಿತು; 11ಇದರಿಂದ ಆ ದೀನವಾದ ಮಂದೆಯಲ್ಲಿ ನನ್ನನ್ನು ಲಕ್ಷಿಸುತ್ತಿದ್ದ ಕುರಿಗಳು, ಇದು ಯೆಹೋವನ ನುಡಿ ಎಂದು ತಿಳಿದುಕೊಂಡವು. 12ಅನಂತರ ನಾನು ನಿಮಗೆ, “ಸರಿಯಾಗಿ ತೋರಿದರೆ ನನಗೆ ಸಂಬಳವನ್ನು ಕೊಡಿರಿ ಇಲ್ಲವಾದರೆ ಬಿಡಿರಿ” ಅನ್ನಲು ಅವರು ಮೂವತ್ತು ತೊಲೆ ಬೆಳ್ಳಿಯನ್ನು ತೂಗಿ ನನ್ನ ಸಂಬಳಕ್ಕಾಗಿ ಕೊಟ್ಟರು.

13ಅವರು ಇವನ ಯೋಗ್ಯತೆ ಇಷ್ಟೇ ಎಂದುಕೊಂಡು ನನಗೆ ಕೊಟ್ಟ ಆ ಭಾರೀ ಸಂಬಳವನ್ನು ಯೆಹೋವನು ನೋಡಿ, “ಅದನ್ನು ಡಬ್ಬಿಗೆ ಹಾಕು” ಎಂದು ಅಪ್ಪಣೆ ಮಾಡಿದಾಗ ನಾನು ಆ ಮೂವತ್ತು ಶೆಕೆಲ್ ಬೆಳ್ಳಿ ನಾಣ್ಯವನ್ನು ತೆಗೆದು ಯೆಹೋವನ ಆಲಯದ ಡಬ್ಬಿಗೆ ಹಾಕಿದೆನು. 14ಕೂಡಲೆ ಯೆಹೂದಕ್ಕೂ, ಇಸ್ರಾಯೇಲಿಗೂ ಇದ್ದ ಸಹೋದರಭಾವವನ್ನು ಭಂಗಪಡಿಸಬೇಕೆಂದು “ಒಗ್ಗಟ್ಟು” ಎಂಬ ನನ್ನ ಎರಡನೆಯ ಕೋಲನ್ನು ಮುರಿದುಬಿಟ್ಟೆನು.

ಮೂರ್ಖನಾದ ಕುರುಬನು

15ಆ ಮೇಲೆ ಯೆಹೋವನು ನನಗೆ ಹೀಗೆ ಅಪ್ಪಣೆ ಮಾಡಿದನು, “ನೀನು ಮತ್ತೊಮ್ಮೆ ತಕ್ಕ ಸಲಕರಣೆಗಳನ್ನು ತೆಗೆದುಕೊಂಡು ಮೂರ್ಖ ಕುರುಬನಂತೆ ನಟಿಸು. 16ಇಗೋ, ದೇಶದಲ್ಲಿ ನಾನು ಒಬ್ಬ ಕುರುಬನನ್ನು ನೇಮಿಸುವೆನು; ಅವನು ಹಾಳಾಗುತ್ತಿರುವ ಕುರಿಗಳನ್ನು ನೋಡಿಕೊಳ್ಳನು, ಚದುರಿದವುಗಳನ್ನು ಹುಡುಕನು, ಊನವಾದವುಗಳನ್ನು ಗುಣಪಡಿಸನು, ನೆಟ್ಟಗಿರುವವುಗಳನ್ನು ಸಾಕನು; ಕೊಬ್ಬಿದವುಗಳ ಮಾಂಸವನ್ನು ತಿನ್ನುವನು, ಕುರಿಗಳ ಗೊರಸುಗಳನ್ನು ಚೂರುಚೂರು ಮಾಡುವನು.

17ಮಂದೆಯನ್ನು ಕಾಯದೆ ಬಿಟ್ಟು ಬಿಟ್ಟ ಕುರುಬನ ಗತಿಯನ್ನು ಏನು ಹೇಳಲಿ?ಖಡ್ಗವು ಅವನ ತೋಳಿಗೂ, ಬಲಗಣ್ಣಿಗೂ ತಾಗುವುದು;ಅವನ ತೋಳು ತೀರಾ ಒಣಗಿಹೋಗುವುದು. ಅವನ ಬಲಗಣ್ಣು ಪೂರಾ ಮೊಬ್ಬಾಗುವುದು.”

KAN-IRV Creative Commons License Indian Revised Version (IRV) - kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Indian Revised Version (IRV) Kannada - 2019 · Creative Commons - Attribution-ShareAlike [CC BY-SA]