Skip to content
The Believer's Library

Indian Revised Version (IRV) Kannada - 2019

Nehemiah 1 IRVKan

Side by side with the Father's Heart Bible™

ನೆಹೆಮೀಯನ ಪ್ರಾರ್ಥನೆ

1ಹಕಲ್ಯನ ಮಗನಾದ ನೆಹೆಮೀಯನ ಚರಿತ್ರೆ: ಇಪ್ಪತ್ತನೆಯ ವರ್ಷದ ಮಾರ್ಗಶಿರ್ಷ ಮಾಸದಲ್ಲಿ ನಾನು ಶೂಷನ್ ಪಟ್ಟಣದ ಅರಮನೆಯಲ್ಲಿದ್ದಾಗ, 2ನನ್ನ ಸಹೋದರಲ್ಲಿ ಒಬ್ಬನಾದ ಹನಾನೀಯನೂ, ಬೇರೆ ಕೆಲವರು ಯೆಹೂದ ಜನರೊಂದಿಗೆ, ನನ್ನ ಬಳಿಗೆ ಬಂದರು. ಸೆರೆಯಾಳುಗಳಾಗಿ ಹೋಗಿದ್ದವರಲ್ಲಿ ಕೆಲವು ಯೆಹೂದ್ಯರು ತಪ್ಪಿಸಿಕೊಂಡು ನನ್ನ ಬಳಿಗೆ ಬಂದಾಗ ಯೆರೂಸಲೇಮಿನ ಸಮಾಚಾರವನ್ನು ನಾನು ಅವರ ಹತ್ತಿರ ವಿಚಾರಿಸಿದೆನು. 3ಅವರು ನನಗೆ, “ಸೆರೆಯವರೊಳಗಿಂದ ತಪ್ಪಿಸಿಕೊಂಡು ಬಂದು ಆ ಸಂಸ್ಥಾನದಲ್ಲಿ ವಾಸಿಸುತ್ತಿರುವವರು ಮಹಾ ಕಷ್ಟನಿಂದೆಗಳಿಗೆ ಒಳಗಾಗಿದ್ದಾರೆ; ಯೆರೂಸಲೇಮಿನ ಪೌಳಿಗೋಡೆಯು ಕೆಡವಲ್ಪಟ್ಟಿದೆ; ಅದರ ಬಾಗಿಲುಗಳು ಬೆಂಕಿಯಿಂದ ಸುಡಲ್ಪಟ್ಟಿವೆ” ಎಂದು ಹೇಳಿದರು. 4ನಾನು ಈ ವರ್ತಮಾನವನ್ನು ಕೇಳಿದ ಕ್ಷಣವೇ ನೆಲದ ಮೇಲೆ ಬಿದ್ದು ಅತ್ತೆನು; ಹಲವು ದಿನಗಳವರೆಗೂ ಶೋಕಿಸುತ್ತಾ ಉಪವಾಸವಾಗಿದ್ದು ಪರಲೋಕದ ದೇವರ ಮುಂದೆ ವಿಜ್ಞಾಪನೆ ಮಾಡುತ್ತಾ ಇದ್ದೆನು. 5ಆ ವಿಜ್ಞಾಪನೆಗಳಲ್ಲಿ ನಾನು, “ಯೆಹೋವನೇ, ಮಹೋನ್ನತನೂ, ಭಯಭಕ್ತಿಗೂ ಪಾತ್ರನಾಗಿರುವ ಪರಲೋಕದ ದೇವರೇ, ನಿನ್ನನ್ನು ಪ್ರೀತಿಸಿ ನಿನ್ನ ಆಜ್ಞೆಗಳನ್ನು ಅನುಸರಿಸುವವರಿಗೆ ಮಾಡಿದ ಕೃಪಾವಾಗ್ದಾನಗಳನ್ನು ನೆರವೇರಿಸುವವನೇ, 6ಕೃಪೆಮಾಡಿ ನನ್ನ ಮೊರೆಗೆ ಕಿವಿಗೊಡು, ನನ್ನನ್ನು ಕಟಾಕ್ಷಿಸು, ನಿನ್ನ ಸೇವಕನ ಪ್ರಾರ್ಥನೆಯನ್ನು ಲಾಲಿಸಬೇಕು. ನಾನು ಈಗ ಹಗಲಿರುಳೂ ನಿನ್ನ ಸನ್ನಿಧಿಯಲ್ಲಿ ನಿನ್ನ ಸೇವಕರಾದ ಇಸ್ರಾಯೇಲರಿಗಾಗಿ ಪ್ರಾರ್ಥಿಸುತ್ತಾ ಅವರು ನಿನಗೆ ವಿರುದ್ಧವಾಗಿ ಮಾಡಿದ ಪಾಪಗಳನ್ನು ಅರಿಕೆ ಮಾಡುತ್ತಾ ಇದ್ದೇನೆ; ನಾನೂ, ನನ್ನ ಪೂರ್ವಿಕರೂ ಆ ಪಾಪಗಳಲ್ಲಿ ಪಾಲುಗಾರರಾಗಿದ್ದೇವೆ. 7ನಾವು ನಿನಗೆ ದ್ರೋಹಿಗಳಾಗಿ ನಡೆಯುತ್ತಾ ಬಂದೆವು; ನೀನು ನಿನ್ನ ಸೇವಕನಾದ ಮೋಶೆಯ ಮುಖಾಂತರ ಕೊಟ್ಟ ಆಜ್ಞಾವಿಧಿನ್ಯಾಯಗಳನ್ನು ನಾವು ಕೈಗೊಳ್ಳಲಿಲ್ಲ. 8ಆದರೂ, ನಿನ್ನ ಸೇವಕನಾದ ಮೋಶೆಗೆ ಹೇಳಿದ ಮಾತನ್ನು ನೆನಪಿಸಿಕೊಳ್ಳಿರಿ; ‘ನೀವು ಅವಿಧೇಯರಾಗಿ ನಡೆಯುವುದಾದರೆ ನಾನು ನಿಮ್ಮನ್ನು ಜನಾಂಗಗಳ ಮದ್ಯ ಚದುರಿಸಿಬಿಡುವೆನು; 9ನನಗೆ ಅಭಿಮುಖರಾಗಿ ನನ್ನ ಆಜ್ಞೆಗಳನ್ನು ಅನುಸರಿಸಿ ನಡೆಯುವುದಾದರೆ ನಿಮ್ಮ ಜನರು ಆಕಾಶದ ಕೊನೆಯವರೆಗೆ ಒಯ್ಯಲ್ಪಟ್ಟರೂ ನಾನು ಅವರನ್ನು ಅಲ್ಲಿಂದ ಕೂಡಿಸಿ, ನನ್ನ ನಾಮಸ್ಥಾಪನೆಗೋಸ್ಕರ ಆರಿಸಿದ ಸ್ಥಳಕ್ಕೆ ಮತ್ತೆ ಬರಮಾಡುವೆನು’ ಎಂದು ಹೇಳಿರುವೆಯಲ್ಲಾ; ಆ ಮಾತನ್ನು ನೆನಪು ಮಾಡಿಕೊಳ್ಳಿರಿ.

10“ಅವರು ನಿನ್ನ ಸೇವಕರೂ, ನೀನು ನಿನ್ನ ಮಹಾಶಕ್ತಿ, ಭುಜಪರಾಕ್ರಮಗಳಿಂದ ವಿಮೋಚಿಸಿದ ನಿನ್ನ ಪ್ರಜೆಗಳೂ ಆಗಿರುತ್ತಾರಲ್ಲಾ. 11ಯೆಹೋವನೇ, ಕೃಪೆಮಾಡು; ನಿನ್ನ ಸೇವಕನಾದ ನನ್ನ ಪ್ರಾರ್ಥನೆಗೂ, ನಿನ್ನ ನಾಮ ಸ್ಮರಣೆಯಲ್ಲಿ ಆನಂದಿಸುವ ನಿನ್ನ ಭಕ್ತರ ಪ್ರಾರ್ಥನೆಗೂ ಕಿವಿಗೊಡು. ನಿನ್ನ ಸೇವಕನು ಈಹೊತ್ತು ಈ ಮನುಷ್ಯನ ದಯೆಗೆ ಪಾತ್ರನಾಗಿ ಸಫಲನಾಗುವಂತೆ ಅನುಗ್ರಹಿಸಬೇಕು” ಎಂದು ಪ್ರಾರ್ಥಿಸಿದೆನು.

KAN-IRV Creative Commons License Indian Revised Version (IRV) - kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Indian Revised Version (IRV) Kannada - 2019 · Creative Commons - Attribution-ShareAlike [CC BY-SA]