Skip to content
The Believer's Library

Indian Revised Version (IRV) Kannada - 2019

1 Chronicles 10 IRVKan

Side by side with the Father's Heart Bible™

ಸೌಲನ ಮರಣ

1ಫಿಲಿಷ್ಟಿಯರು ಇಸ್ರಾಯೇಲರೊಡನೆ ಯುದ್ಧಮಾಡಿದರು. ಇಸ್ರಾಯೇಲರು ಅವರಿಂದ ಅಪಜಯಹೊಂದಿ ಗಿಲ್ಬೋವ ಬೆಟ್ಟದಲ್ಲಿ ಸತ್ತುಹೋದರು. 2ಫಿಲಿಷ್ಟಿಯರು ಸೌಲನನ್ನೂ, ಅವನ ಮಕ್ಕಳನ್ನೂ ಬಿಡದೆ ಹಿಂದಟ್ಟಿ, ಅವನ ಮಕ್ಕಳಾದ ಯೋನಾತಾನನ್ನೂ, ಅಬೀನಾದಾಬನನ್ನೂ ಮತ್ತು ಮಲ್ಕೀಷೂವನನ್ನೂ ಕೊಂದರು. 3ಸೌಲನಿದ್ದ ಕಡೆಯಲ್ಲಿ ಯುದ್ಧವು ಬಹು ಘೋರವಾಗಿತ್ತು. ಬಿಲ್ಲುಗಾರರು ಅವನಿಗೆ ಗುರಿಯಿಟ್ಟರು. 4ಆಗ ಸೌಲನು ತನ್ನ ಆಯುಧ ಹೊರುವವನಿಗೆ, “ನಿನ್ನ ಕತ್ತಿಯನ್ನು ಹಿರಿದು ನನ್ನನ್ನು ತಿವಿದು ಕೊಲ್ಲು, ಇಲ್ಲವಾದರೆ ಸುನ್ನತಿಯಿಲ್ಲದ ಈ ಜನರು ಬಂದು ನನಗೆ ಅಪಕೀರ್ತಿ ತಂದಾರು” ಎಂದು ಹೇಳಲು ಅವನು ಹೆದರಿ ಹಿಂಜರಿದನು. ಆದುದರಿಂದ ಸೌಲನು ತಾನೇ ಕತ್ತಿಯನ್ನು ಹಿರಿದು, ಅದರ ಮೇಲೆ ಬಿದ್ದನು. 5ಸೌಲನು ಸತ್ತದ್ದನ್ನು ಅವನ ಆಯುಧ ಹೊರುವವನು ಕಂಡು ತಾನೂ ತನ್ನ ಕತ್ತಿಯ ಮೇಲೆ ಬಿದ್ದು ಸತ್ತನು. 6ಹೀಗೆ ಸೌಲನೂ, ಅವನ ಮೂರು ಮಕ್ಕಳೂ, ಅವನ ಮನೆಯವರೆಲ್ಲರೂ ಅದೇ ದಿನದಲ್ಲಿ ಸತ್ತರು. 7ಇಸ್ರಾಯೇಲರು ಸೋತು ಹೋದರು. ಸೌಲನೂ, ಅವನ ಮಕ್ಕಳು ಸತ್ತರು ಎಂಬ ವರ್ತಮಾನವನ್ನು ತಗ್ಗಿನಲ್ಲಿ ವಾಸವಾಗಿದ್ದ ಇಸ್ರಾಯೇಲರೆಲ್ಲರೂ ಕೇಳಿ ತಮ್ಮ ಪಟ್ಟಣಗಳನ್ನು ಬಿಟ್ಟು ಓಡಿಹೋದರು. ಫಿಲಿಷ್ಟಿಯರು ಬಂದು ಅವುಗಳಲ್ಲಿ ವಾಸಮಾಡಿದರು.

8ಮರುದಿನ ಬೆಳಿಗ್ಗೆ ಫಿಲಿಷ್ಟಿಯರು ಸತ್ತವರ ಒಡವೆಗಳನ್ನು ಸುಲಿದುಕೊಳ್ಳುವುದಕ್ಕಾಗಿ ಬಂದಾಗ, ಸೌಲನೂ ಅವನ ಮೂರು ಮಕ್ಕಳೂ ಗಿಲ್ಬೋವ ಬೆಟ್ಟದಲ್ಲಿ ಸತ್ತುಬಿದ್ದಿರುವುದನ್ನು ಕಂಡರು. 9ಫಿಲಿಷ್ಟಿಯರು ಸೌಲನಿಗಿರುವುದೆಲ್ಲವನ್ನು ಸುಲಿದುಕೊಂಡು ಅವನ ತಲೆಯನ್ನೂ, ಆಯುಧಗಳನ್ನೂ ತಮ್ಮ ದೇಶದ ಎಲ್ಲಾ ಕಡೆಗೆ ಕಳುಹಿಸಿ, ತಮ್ಮ ದೇವತೆಗಳಿಗೂ, ಜನರಿಗೂ ಜಯವಾರ್ತೆಯನ್ನು ಮುಟ್ಟಿಸಿದರು. 10ಅವನ ಆಯುಧಗಳನ್ನು ತಮ್ಮ ದೇವಸ್ಥಾನದಲ್ಲಿಟ್ಟರು. ಅವನ ತಲೆಯನ್ನು ದಾಗೋನನ ಗುಡಿಯಲ್ಲಿ ನೇತುಹಾಕಿದರು. 11ಫಿಲಿಷ್ಟಿಯರು ಸೌಲನಿಗೆ ಏನೇನು ಮಾಡಿದರೆಂಬ ವರ್ತಮಾನವು ಯಾಬೇಷ್ ಗಿಲ್ಯಾದವರಿಗೆ ಮುಟ್ಟಿತು. 12ಆಗ ಅವರಲ್ಲಿರುವ ಶೂರರೆಲ್ಲರೂ ಹೊರಟುಹೋಗಿ ಸೌಲನ ಮತ್ತು ಅವನ ಮಕ್ಕಳ ಶವಗಳನ್ನು ಯಾಬೇಷಿಗೆ ತೆಗೆದುಕೊಂಡು ಬಂದು, ಅವರ ಎಲುಬುಗಳನ್ನು ಅಲ್ಲಿದ್ದ ಏಲಾ ಮರದ ಕೆಳಗೆ ಸಮಾಧಿ ಮಾಡಿ, ಏಳು ದಿನಗಳ ವರೆಗೆ ಉಪವಾಸ ಮಾಡಿದರು.

13ಸೌಲನು ಯೆಹೋವನ ಮಾತು ಕೇಳದೆ ಆತನಿಗೆ ವಿರೋಧವಾಗಿ ದ್ರೋಹ ಮಾಡಿದ್ದರಿಂದಲೂ, ಯೆಹೋವನ ಸನ್ನಿಧಿಯಲ್ಲಿ ವಿಚಾರಿಸದೇ, ಭೂತ, ಪ್ರೇತಗಳನ್ನು ನಂಬಿ ದೇವ ದ್ರೋಹಿಯಾದುದರಿಂದ ಅವನಿಗೆ ಇಂಥ ಮರಣವಾಯಿತು. 14ಯೆಹೋವನು ಅವನನ್ನು ಕೊಲ್ಲಿಸಿ, ರಾಜ್ಯವನ್ನು ಇಷಯನ ಮಗನಾದ ದಾವೀದನಿಗೆ ಒಪ್ಪಿಸಿದನು.

KAN-IRV Creative Commons License Indian Revised Version (IRV) - kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Indian Revised Version (IRV) Kannada - 2019 · Creative Commons - Attribution-ShareAlike [CC BY-SA]